ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ | ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟಕ್ಕೆ ತಾತ್ಕಾಲಿಕ ತಡೆ

Update: 2024-11-15 16:02 GMT

PC : PTI

ರಾಂಚಿ : ವಾಯು ಸಂಚಾರ ನಿಯಂತ್ರಣ (ಎಟಿಸಿ) ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ಜಾರ್ಖಂಡ್‌ ನ ಗೊಡ್ಡಾದಲ್ಲಿ ಶುಕ್ರವಾರ ತಡೆ ಹಿಡಿಯಲಾಗಿತ್ತು.

ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಸುಮಾರು 45 ನಿಮಿಷಗಳ ಕಾಲ ಹಾರಾಟ ಅನುಮತಿ ಪಡೆಯಲಿಲ್ಲ.

ಕೇವಲ ಪ್ರಧಾನಿ ಅವರು ದೇವಗಢದಲ್ಲಿ ಇರುವ ಕಾರಣಕ್ಕೆ ಈ ಪ್ರದೇಶವನ್ನು ದಾಟಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡಿರಲಿಲ್ಲ. ಅಲ್ಲಿ ಶಿಷ್ಟಾಚಾರವಿದೆ. ಅದು ನಮಗೆ ಗೊತ್ತು. ಆದರೆ, ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಆಳಿದೆ. ಆದರೆ, ಪ್ರತಿಪಕ್ಷದ ಯಾವುದೇ ನಾಯಕರು ಇಂತಹ ಘಟನೆ ಎದುರಿಸಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಶಾಸಕಿ ಹಾಗೂ ಮಹಾಗಾಮಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಹೇಳಿದ್ದಾರೆ.

ಇದು ಜಾರ್ಖಂಡ್ ವಿಧಾನ ಸಭೆ ಚುನಾವಣೆಯ ಅಂತಿಮ ಹಂತದ ಮತದಾನದ ಮುನ್ನ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸದಂತೆ ತಡೆಯುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಗೊಡ್ಡಾದಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾರಣ ವಾಯು ಸಂಚಾರ ನಿಯಂತ್ರಣ ಅನುಮತಿ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಆತಂಕದಿಂದ ತನ್ನ ಹೆಲಿಕಾಪ್ಟರ್ ಹಾರಾಟ ವಿಳಂಬದ ಕುರಿತಂತೆ ರಾಷ್ಟ್ರಪತಿ ಅವರು ಮಧ್ಯಪ್ರವೇಶಿಸುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆಗ್ರಹಿಸಿದ ದಿನಗಳ ಬಳಿಕ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News