ಏರ್ ಇಂಡಿಯಾ ವಿಮಾನದ ಕ್ಯಾಬಿನ್ ನಲ್ಲಿ ನೀರು ಸೋರಿಕೆ: ಮುಳುಗಿ ಹೋದ ಅನುಭವವಾಯಿತು ಎಂದ ಪ್ರಯಾಣಿಕ

Update: 2023-11-30 14:46 GMT

Photo:X/baldwhiner

ಹೊಸದಿಲ್ಲಿ: ಲಂಡನ್ ನಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಅಹಿತಕರ ಅನುಭವವಾಗಿದ್ದು, ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರ ತಲೆಯ ಮೇಲಿನ ಸಾಮಾನು ಸಂಗ್ರಹ ಕ್ಯಾಬಿನ್ ನಿಂದ ನೀರು ಸೋರಿಕೆಯಾಗಿದೆ. ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಏರ್ ಇಂಡಿಯಾ, “ಈ ಅನಿರೀಕ್ಷಿತ ಘಟನೆಗಾಗಿ ವಿಷಾದಿಸುತ್ತೇವೆ” ಎಂದು ಕ್ಷಮೆ ಕೋರಿದೆ ಎಂದು ndtv.com ವರದಿ ಮಾಡಿದೆ.

ಪ್ರಯಾಣಿಕರೊಬ್ಬರು ಈ ಘಟನೆಯ ವಿಡಿಯೊವೊಂದನ್ನು ʻxʻ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಆ ವೀಡಿಯೊದಲ್ಲಿ ತಲೆಯ ಮೇಲಿನ ಸಾಮಾನು ಸಂಗ್ರಹದ ಕ್ಯಾಬಿನ್ ನ ಸಂದಿಯಿಂದ ಕೆಲವು ಆಸನಗಳ ಮೇಲೆ ನೀರು ತೊಟ್ಟಿಕ್ಕುತ್ತಿರುವುದನ್ನು ನೋಡಬಹುದಾಗಿದೆ.

“ಏರ್ ಇಂಡಿಯಾ.. ನಮ್ಮೊಂದಿಗೆ ಹಾರಾಟ ನಡೆಸಿ – ಇದು ಪ್ರವಾಸವಲ್ಲ; ಬದಲಿಗೆ ಮುಳುಗಿ ಹೋದ ಅನುಭವವಾಗಿದೆ” ಎಂದು ಆ ಪ್ರಯಾಣಿಕರು ಪೋಸ್ಟ್ ಮಾಡಿ, ಅಕ್ಟೋಬರ್ 2021ರಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಖರೀದಿಸಿದ್ದ ಟಾಟಾ ಸನ್ಸ್ ಸಂಸ್ಥೆಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.

“ನವೆಂಬರ್ 24ರಂದು ಗ್ಯಾಟ್ ವಿಕ್ ನಿಂದ ಅಮೃತಸರಕ್ಕೆ ತೆರಳುತ್ತಿದ್ದ ಎಐ169 ವಿಮಾನದ ಕ್ಯಾಬಿನ್ ನಲ್ಲಿ ಅಪರೂಪದ ಶೀತಲೀಕರಣ ಹೊಂದಾಣಿಕೆಯ ಸಮಸ್ಯೆ ತಲೆದೋರಿದೆ” ಎಂದು ಏರ್ ಇಂಡಿಯಾ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ, ರಾಷ್ಟ್ರೀಕರಣಗೊಂಡ ಸುಮಾರು 70 ವರ್ಷಗಳ ನಂತರ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಸಂಸ್ಥೆಯು ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರಿಂದ ಸೇವಾ ಪೂರೈಕೆಯು ಉತ್ತಮಗೊಳ್ಳಬಹುದು ಎಂಬ ಆಶಾವಾದ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News