ಸಂಭಾವ್ಯ ಅಪಾಯದ ಬಗ್ಗೆ ವಿಮಾನಯಾನ ಸಂಸ್ಥೆಗಳಿಗೆ ಸುರಕ್ಷತಾ ಸಲಹೆಗಳನ್ನು ಹೊರಡಿಸಿದ ಡಿಜಿಸಿಎ
ಹೊಸದಿಲ್ಲಿ: ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ವು ಏರ್‌ಇಂಡಿಯಾ ಎಕ್ಸ್‌ಪ್ರೆಸ್,ಆಕಾಶ ಏರ್ ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಬೋಯಿಂಗ್ 737 ವಿಮಾನಗಳನ್ನು ನಿರ್ವಹಿಸುವ ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದೋಷಯುಕ್ತ ರಡರ್ ಕಂಟ್ರೋಲ್ ಸಿಸ್ಟಮ್ ಅಥವಾ ಚುಕ್ಕಾಣಿ ನಿಯಂತ್ರಣ ವ್ಯವಸ್ಥೆಗಳ ಸಂಭವನೀಯ ಅಪಾಯದ ಕುರಿತು ಸುರಕ್ಷತಾ ಶಿಫಾರಸುಗಳನ್ನು ಹೊರಡಿಸಿದೆ.
ಇತರ ಕ್ರಮಗಳಲ್ಲಿ ವಿಮಾನದ ಸುರಕ್ಷತಾ ಅಪಾಯದ ಮೌಲ್ಯಮಾಪನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಕಾಲಿನ್ಸ್ ಎರೋಸ್ಪೇಸ್ ಎಸ್‌ವಿಒ-730 ರಡರ್ ರೋಲ್‌ಔಟ್ ಗೈಡನ್ಸ್ ಎಕ್ಚುವೇಟರ್‌ಗಳನ್ನು ಹೊಂದಿರುವ ಬೋಯಿಂಗ್ 737 ವಿಮಾನಗಳಿಗೆ ಸಂಬಂಧಿಸಿದಂತೆ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ(ಎನ್‌ಟಿಎಸ್‌ಬಿ)ಯು ಸುರಕ್ಷತಾ ಕಳವಳಗಳನ್ನು ವ್ಯಕ್ತಪಡಿಸಿದ ಬಳಿಕ ಡಿಜಿಸಿಎ ಸಲಹೆಯು ಬಂದಿದೆ.
ಸುತ್ತೋಲೆ/ಸಲಹಾ ಸೂಚಿಯ ಮೂಲಕ ಎಲ್ಲ ವಿಮಾನ ಸಿಬ್ಬಂದಿಗಳಿಗೆ ಚುಕ್ಕಾಣಿ ನಿಯಂತ್ರಣ ವ್ಯವಸ್ಥೆಗಳು ಜಾಮ್ ಆಗುವ ಅಥವಾ ನಿರ್ಬಂಧಿತಗೊಳ್ಳುವ ಸಾಧ್ಯತೆಯ ಕುರಿತು ತಿಳಿಸಬೇಕು. ಅಂತಹ ಸ್ಥಿತಿಯನ್ನು ಗುರುತಿಸಲು ಮತ್ತು ನಿರ್ವಹಿಸಲು ಸಿಬ್ಬಂದಿಗಳಿಗೆ ನೆರವಾಗಲು ಸೂಕ್ತ ಕ್ರಮಗಳ ಬಗ್ಗೆ ತಿಳಿಸಬೇಕು ಎಂದು ಡಿಜಿಸಿಎ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಚುಕ್ಕಾಣಿ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದ ಅಪಾಯದ ಮೌಲ್ಯಮಾಪನ ಮತ್ತು ಮತ್ತು ಶಮನಗೊಳಿಸಲು ಎಲ್ಲ ವಿಮಾನಯಾನ ಸಂಸ್ಥೆಗಳು ಸುರಕ್ಷತಾ ಅಪಾಯ ಮೌಲ್ಯಮಾಪನವನ್ನು ನಡೆಸಬೇಕು ಎಂದೂ ಹೇಳಿಕೆಯು ತಿಳಿಸಿದೆ.
ಫೆಬ್ರವರಿಯಲ್ಲಿ ಯುನೈಟೆಡ್ ಏರ್‌ಲೈನ್ಸ್‌ನ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿ ಚುಕ್ಕಾಣಿ ನಿಯಂತ್ರಣ ವ್ಯವಸ್ಥೆಯು ಜಾಮ್ ಆಗಿದ್ದ ಘಟನೆಯ ಕುರಿತು ತನಿಖೆಯ ಬಳಿಕ ಸೆ.27ರಂದು ಎನ್‌ಟಿಎಸ್‌ಬಿ ಕೆಲವು ಬೋಯಿಂಗ್ 737 ವಿಮಾನಗಳಲ್ಲಿ ಚಕ್ಕಾಣಿ ನಿಯಂತ್ರಣ ವ್ಯವಸ್ಥೆಗಳು ಜಾಮ್ ಆಗುವ ಸಂಭವನೀಯ ಅಪಾಯದ ಬಗ್ಗೆ ತುರ್ತು ಸುರಕ್ಷತಾ ಸಲಹೆಗಳನ್ನು ಹೊರಡಿಸಿತ್ತು.
ಕಾಲಿನ್ಸ್ ಎರೋಸ್ಪೇಸ್ ತಯಾರಿಕೆಯ ಎಸ್‌ವಿಒ-730 ರಡರ್ ರೋಲ್‌ಔಟ್ ಗೈಡನ್ಸ್ ಎಕ್ಚುವೇಟರ್‌ನಲ್ಲಿ ಸಮಸ್ಯೆಯಿದೆ ಎನ್ನುವುದನ್ನು ಎನ್‌ಟಿಎಸ್‌ಬಿ ತನಿಖೆಯು ಕಂಡುಕೊಂಡಿತ್ತು. ಎಕ್ಚುವೇಟರ್‌ಗಳ ತಯಾರಿಕೆ ಸಮಯದಲ್ಲಿ ಬೇರಿಂಗ್ ಅನ್ನು ತಪ್ಪಾಗಿ ಜೋಡಿಸಲಾಗಿತ್ತು ಎನ್ನುವುದನ್ನು ಕಾಲಿನ್ಸ್ ಎರೋಸ್ಪೇಸ್ ಪತ್ತೆ ಹಚ್ಚಿತ್ತು.
2017ರಿಂದ ಕಾಲಿನ್ಸ್ ಎರೋಸ್ಪೇಸ್ ಬೋಯಿಂಗ್ ಕಂಪನಿಗೆ ಪೂರೈಸಿರುವ 350ಕ್ಕೂ ಅಧಿಕ ಎಕ್ಚುವೇಟರ್‌ಗಳು ಈ ದೋಷವನ್ನು ಹೊಂದಿವೆ ಎಂದು ಎನ್‌ಟಿಎಸ್‌ಬಿ ಹೇಳಿದೆ.
ಎಲ್ಲ ಬೋಯಿಂಗ್ 737 ವಿಮಾನಗಳಿಗೆ ಈ ಎಕ್ಚುವೇಟರ್ ಅಳವಡಿಸಲಾಗಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅಲ್ಲದೆ ಭಾರತದಲ್ಲಿ ಎಷ್ಟುವಿಮಾನಗಳು ಈ ಸಂಭಾವ್ಯ ದೋಷಯುಕ್ತ ಭಾಗವನ್ನು ಹೊಂದಿರಬಹುದು ಎನ್ನುವುದು ಸ್ಪಷ್ಟವಾಗಿಲ್ಲ.