ಬಾರಾಮತಿ ರಾಜಕೀಯದ ‘ದಾದಾ’ ಎಂದು ತನ್ನನ್ನು ಸಾಬೀತುಪಡಿಸಿದ ಅಜಿತ್ ಪವಾರ್
ಮುಂಬೈ: ಪಶ್ಚಿಮ ಮಹಾರಾಷ್ಟ್ರದಲ್ಲಿ ವ್ಯಾಪಕ ಗಮನ ಸೆಳೆದಿದ್ದ ಬಾರಾಮತಿ ವಿಧಾನಸಭಾ ಕ್ಷೇತ್ರವು ಲೋಕಸಭಾ ಚುನಾವಣೆಗಳ ಬಳಿಕ ಪವಾರ್ ಕುಟುಂಬದ ನಡುವೆ ಇನ್ನೊಂದು ತೀವ್ರ ಕಾಳಗಕ್ಕೆ ಸಾಕ್ಷಿಯಾಗಿತ್ತು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಅತ್ಯಂತ ಅನುಭವಿ ರಾಜಕಾರಣಿ ಅಜಿತ್ ಪವಾರ್ ಮತ್ತು ಅವರ ಸೋದರ ಪುತ್ರ,ಅಷ್ಟೇನೂ ರಾಜಕೀಯ ಅನುಭವವಿಲ್ಲದ ಎನ್ಸಿಪಿ(ಶರದ್ ಪವಾರ್) ಅಭ್ಯರ್ಥಿ ಯುಗೇಂದ್ರ ಪವಾರ್ ಪರಸ್ಪರ ಎದುರಾಳಿಗಳಾಗಿದ್ದರು.
ಕಳೆದ ಲೋಕಸಭಾ ಚುನಾವಣೆಗಳಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರು ಬಾರಾಮತಿಯಲ್ಲಿ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಲೆ ಎದುರು ಸೋಲನ್ನಪ್ಪಿದ್ದರು. ಆದರೆ ಈ ಚುನಾವಣೆಯಲ್ಲಿ ತನ್ನ ತವರು ಕ್ಷೇತ್ರ ಬಾರಾಮತಿಯಲ್ಲಿ ಯುಗೇಂದ್ರ ಪವಾರ್ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸುವ ಮೂಲಕ ಅಜಿತ್ ಪವಾರ್ ಮತ್ತಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿದ್ದಾರೆ.
ಬಾರಾಮತಿ ಮೊದಲಿನಿಂದಲೂ ಪವಾರ್ ಕುಟುಂಬದ ಭದ್ರಕೋಟೆಯಾಗಿದೆ, ಆದರೆ ಈ ಚುನಾವಣೆಯು ಅಜಿತ್ ಪವಾರ್ ಮತ್ತು ಶರದ್ ಪವಾರ್ ನಡುವಿನ ಕಾಳಗವಾಗಿ ಮಾರ್ಪಟ್ಟಿತ್ತು. ಅಜಿತ್ ಪವಾರ್ ಬಾರಾಮತಿಯಲ್ಲಿ ಮಾತ್ರವಲ್ಲ, ಪಶ್ಚಿಮ ಮಹಾರಾಷ್ಟ್ರದಲ್ಲಿಯೂ ಶರದ್ ಪವಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನೊಂದಿಗೆ ಅಜಿತ್ ಪವಾರ್ ತನ್ನನ್ನು ಬಾರಾಮತಿ ರಾಜಕೀಯದ ‘ದಾದಾ’ ಎಂದು ದೃಢವಾಗಿ ಮರು ಸಾಬೀತುಮಾಡಿದ್ದಾರೆ. ಬಾರಾಮತಿಯಲ್ಲಿ ಮತ್ತು ಪಶ್ಚಿಮ ಮಹಾರಾಷ್ಟ್ರದ ಪ್ರಾದೇಶಿಕ ರಾಜಕೀಯದಲ್ಲಿ ತನ್ನ ಅಧಿಕಾರ ಮತ್ತು ಪ್ರಾಬಲ್ಯವನ್ನು ಭದ್ರಪಡಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಾರಾಮತಿಯ ಸ್ಥಳೀಯ ಮತದಾರರಲ್ಲಿ ಲೋಕಸಭೆಗೆ ಸುಪ್ರಿಯಾ ಸುಲೆಗೆ ಬೆಂಬಲ ಮತ್ತು ವಿಧಾನಸಭೆಗೆ ಅಜಿತ್ ಪವಾರ್ ಗೆ ಬೆಂಬಲ ಎಂಬ ಭಾವನೆ ಸ್ಪಷ್ಟವಾಗಿತ್ತು. ಈ ಸಲ ನಗರ ಪ್ರದೇಶದ ಹೆಚ್ಚಿನ ಮತದಾರರು ಅಜಿತ್ ಪವಾರ್ರನ್ನು ಬೆಂಬಲಿಸಿದ್ದರೆ ಗ್ರಾಮೀಣ ಮತದಾರರು ಶರದ್ ಪವಾರ್ ನೇತೃತ್ವದ ಎನ್ಸಿಪಿ ಪರ ಮತ ಚಲಾಯಿಸದ್ದಾರೆ.
ಪಶ್ಚಿಮ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನ ಕಳಪೆ ಪ್ರದರ್ಶನ
ಐತಿಹಾಸಿಕವಾಗಿ ಪ.ಮಹಾರಾಷ್ಟ್ರ ಕಾಂಗ್ರೆಸ್ ಮತ್ತು ಎನ್ಸಿಪಿ(ಶರದ್ ಪವಾರ್) ಈ ಎರಡೂ ಪಕ್ಷಗಳ ಭದ್ರಕೋಟೆಯಾಗಿದೆ. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪರದಾಡಿದೆ. ಕಾಂಗ್ರೆಸ್ ನ ಕಳಪೆ ಪ್ರದರ್ಶನವು ವಿಶೇಷವಾಗಿ ಸಾಂಗ್ಲಿ ಮತ್ತು ಕೊಲ್ಲಾಪುರದಂತಹ ಪಶ್ಚಿಮ ಮಹಾರಾಷ್ಟ್ರದ ಜಿಲ್ಲೆಗಳ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ತನ್ನ ಸಾಂಪ್ರದಾಯಿಕ ಮತದಾರರ ನೆಲೆಯನ್ನು ಉಳಿಸಿಕೊಳ್ಳುವಲ್ಲಿ ಅದರ ಅಸಾಮರ್ಥ್ಯವನ್ನು ತೋರಿಸಿದೆ.
ಸೌಜನ್ಯ : thewire.in
ಬಿಜೆಪಿ, ಶಿವಸೇನೆ( ಶಿಂಧೆ ಬಣ) ಮತ್ತು ಎನ್ಸಿಪಿ (ಅಜಿತ್ ಪವಾರ್ ಬಣ)ಗಳನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟವು ಪರಿಣಾಮಕಾರಿಯಾಗಿ ಮತದಾರರನ್ನು ಒಗ್ಗೂಡಿಸುವ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಚುನಾವಣೆಯಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಥಳೀಯ ಮಟ್ಟದಲ್ಲಿ ಸಮನ್ವಯದ ಕೊರತೆಯಿಂದಾಗಿ ಕಾಂಗ್ರೆಸ್,ಶಿವಸೇನೆ(ಉದ್ಧವ ಠಾಕ್ರೆ ಬಣ) ಮತ್ತು ಎನ್ಸಿಪಿ (ಶರದ್ ಪವಾರ್ ಬಣ)ಗಳನ್ನೊಳಗೊಂಡ ಮಹಾ ವಿಕಾಸ ಅಘಾಡಿ(ಎಂವಿಎ) ಎಡವಿತ್ತು ಮತ್ತು ಅಂತಿಮವಾಗಿ ಪ.ಮಹಾರಾಷ್ಟ್ರದಲ್ಲಿ ತನ್ನ ನೆಲೆಯನ್ನು ಕಳೆದುಕೊಂಡಿದೆ.