ಅಜ್ಮೀರ್ ಇಮಾಮ್ ಹತ್ಯೆ: ಆರು ಮದರಸ ವಿದ್ಯಾರ್ಥಿಗಳು ವಶಕ್ಕೆ
ಅಜ್ಮೀರ್: ಇಲ್ಲಿನ ಮುಹಮ್ಮದಿ ಮಸೀದಿಯ ಇಮಾಮ್ ಮೌಲಾನಾ ಮುಹಮ್ಮದ್ ಮಹೀರ್ (32) ಎಂಬವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಅಜ್ಮೀರ್ ಪೊಲೀಸರು ಆರು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಹೀರ್ ಅವರನ್ನು ಏಪ್ರಿಲ್ 27ರಂದು ಹತ್ಯೆ ಮಾಡಲಾಗಿತ್ತು. ಮಹೀರ್ ಅವರ ಮೊಬೈಲ್ ಹಾಗೂ ಅವರನ್ನು ಉಸಿರುಗಟ್ಟಿಸಲು ಬಳಸಿದ್ದ ಹಗ್ಗವನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
"ಮೂವರು ಮುಸುಕುಧಾರಿಗಳು ಮಹೀರ್ ಅವರನ್ನು ಹತ್ಯೆ ಮಾಡಿದ್ದರು ಹಾಗೂ ಈ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು" ಎಂದು ಕಳೆದ ಹದಿನೈದು ದಿನಗಳಿಂದ ಈ ವಿದ್ಯಾರ್ಥಿಗಳು ಹೇಳುತ್ತಾ ಬಂದಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ಬಳಿಕ ಕೂಡಾ ಯಾವುದೇ ಸುಳಿವು ಸಿಗದೇ ಇದ್ದ ಕಾರಣದಿಂದ ಈ ಪ್ರಕರಣ ತನಿಖಾ ತಂಡಕ್ಕೆ ಸವಾಲಿನ ಪ್ರಕರಣವಾಗಿತ್ತು ಎಂದು ಎಸ್ಪಿ ದೇವೇಂದ್ರ ಕುಮಾರ್ ಬಿಷ್ಣೋಯಿ ವಿವರಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಮಹೀರ್ ಅವರ ಹಿನ್ನೆಲೆಯನ್ನು ತಿಳಿದ ಬಳಿಕವೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಕೊನೆಗೆ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದು ವಿಚಾರಿಸಿದಾಗ ಇಡೀ ಘಟನೆ ಅನಾವರಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಮದರಸದಲ್ಲಿ ಕಲಿಯುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಮಹೀರ್ ಲೈಂಗಿಕವಾಗಿ ಶೋಷಿಸಿದ್ದರು ಎನ್ನಲಾಗಿದೆ. ಇದನ್ನು ಬಹಿರಂಗಪಡಿಸುವ ಬೆದರಿಕೆ ಒಡ್ಡಿದಾಗ, ಮಹೀರ್ ಸಂತ್ರಸ್ತ ವಿದ್ಯಾರ್ಥಿಗೆ ಹಣದಾಸೆ ತೋರಿಸಿದ್ದರು. ನಿರಂತರ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು ಮಹೀರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದರು. ಬಡಿಗೆಗಳಿಂದ ಹೊಡೆದು ಹಗ್ಗದಿಂದ ಉಸಿರುಕಟ್ಟಿಸಿ ಕೊಲೆ ಮಾಡಿದರು ಎಂದು ಬಿಷ್ಣೋಯಿ ವಿವರಿಸಿದ್ದಾರೆ.