“ರಾಜ್ ಕೋಟ್ ನ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ” | ಮಗುವಿನೊಂದಿಗೆ ಝೊಮ್ಯಾಟೊದಲ್ಲಿ ಪುಡ್ ಡೆಲಿವರಿ ಮಾಡುವ ಮಹಿಳೆಯ ವೀಡಿಯೊ ವೈರಲ್
ರಾಜ್ ಕೋಟ್ : ತನ್ನ ಮಗುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಮಹಿಳೆಯೋರ್ವರು ಪುಡ್ ಡೆಲಿವರಿಗೆ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ. ಝೊಮ್ಯಾಟೊ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಗುಜರಾತ್ ರಾಜ್ಯದ ರಾಜ್ ಕೋಟ್ ನ ಮಹಿಳೆಯೋರ್ವರ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕವಾದ ಪ್ರಶಂಸೆಗೆ ಕಾರಣವಾಗಿದ್ದು, ಕೆಲವರು ಮಹಿಳೆಯನ್ನು ʼಝಾನ್ಸಿ ರಾಣಿ ಲಕ್ಷ್ಮೀ ಬಾಯಿʼಗೆ ಹೋಲಿಕೆ ಮಾಡಿದ್ದಾರೆ.
ವಿಶ್ವಿದ್(vishvid) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಬಳಕೆದಾರರು ಮಹಿಳೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಝೊಮ್ಯಾಟೊ ಬ್ಯಾಗ್ ಹಾಕಿಕೊಂಡಿರುವ ಮಹಿಳೆ ಹೀರೋ ಹೋಂಡಾ ಸ್ಪ್ಲೆಂಡರ್ ನಲ್ಲಿ ಮಗುವನ್ನು ಕೂರಿಸಿಕೊಂಡು ತೆರಳುತ್ತಿರುವುದು ಕಂಡು ಬಂದಿದೆ. ವೀಡಿಯೊದ ಶೀರ್ಷಿಕೆಯಲ್ಲಿ ರಾಜ್ ಕೋಟ್ ನ ʼಝಾನ್ಸಿ ರಾಣಿ ಲಕ್ಷ್ಮೀ ಬಾಯಿʼ ಎಂದು ಬರೆಯಲಾಗಿದೆ.
ವೀಡಿಯೊದಲ್ಲಿನ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತೆಯೇ ಕಾಣುತ್ತಿದ್ದರು. ಯುದ್ಧದ ಸಮಯದಲ್ಲಿ ಝಾನ್ಸಿ ರಾಣಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡಿದ್ದರೆ, ಇವರು ಕೆಲಸಕ್ಕೆ ಹೋಗುವಾಗ ಮಗುವನ್ನು ಬೈಕ್ ನಲ್ಲಿ ಮುಂದಕ್ಕೆ ಕೂರಿಸಿಕೊಂಡಿದ್ದರು ಎಂದು ಹಲವರು ಹೇಳಿಕೊಂಡಿದ್ದಾರೆ.
ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ ಮಹಿಳೆಯೊಂದಿಗೆ ಮಾತನಾಡಿದ್ದಾನೆ. ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಲು ಆರಂಭಿಸಿ ಕೇವಲ ಒಂದು ತಿಂಗಳಾಗಿದೆ. ನಾನು ಹೋಟೆಲ್ ಮ್ಯಾನೇಜ್ಮೆಂಟ್ ಓದಿದ್ದೇನೆ, ಆದರೆ ಮದುವೆಯಾದ ನಂತರ ನನಗೆ ಉದ್ಯೋಗ ಸಿಕ್ಕಿಲ್ಲ. ಅದಕ್ಕಾಗಿಯೇ ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ನಾನು ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದೆ. ನನಗೆ ಮಗುವಿದೆ ಎಂದು ಅನೇಕ ಕಂಪನಿಗಳು ಕೆಲಸ ಕೊಟ್ಟಿಲ್ಲ. ನನ್ನ ಬಳಿ ಬೈಕ್ ಇರುವುದರಿಂದ ನಾನು ಪುಡ್ ಡೆಲಿವರಿ ಯಾಕೆ ಮಾಡಬಾರದು ಎಂದು ಯೋಚಿಸಿದೆ ಎಂದು ಹೇಳಿದ್ದಾರೆ.
ಈ ಪೋಸ್ಟ್ ಸಾವಿರಾರು ಲೈಕ್ ಗಳನ್ನು ಮತ್ತು ಕಾಮೆಂಟ್ ಗಳನ್ನು ಸ್ವೀಕರಿಸಿದೆ. ಮಹಿಳೆಯ ಕಠಿಣ ಪರಿಶ್ರಮಕ್ಕೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಬೈಕ್ ರೈಡ್ ಮಾಡುವಾಗ ಹೆಲ್ಮೆಟ್, ಚಪ್ಪಲಿ ಧರಿಸಲು, ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಮಹಿಳೆಗೆ ಸಲಹೆಯನ್ನು ನೀಡಿದ್ದಾರೆ.