ಅಲಿಗಢದಲ್ಲಿ ಗುಂಪಿನಿಂದ ಹತ್ಯೆಗೀಡಾದ ವ್ಯಕ್ತಿಯ ಸಹೋದರನಿಗೆ ಬಂಧನದಿಂದ ರಕ್ಷಣೆ ನೀಡಿದ ಅಲಹಾಬಾದ್ ಹೈಕೋರ್ಟ್
ಹೊಸದಿಲ್ಲಿ: ವ್ಯಾಪಾರಿಯೊಬ್ಬರ ಮನೆಯಲ್ಲಿ ದರೋಡೆ ಮತ್ತು ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿ ಅಲಿಗಢದಲ್ಲಿ ಗುಂಪಿನಿಂದ ಹತ್ಯೆಗೀಡಾದ ವ್ಯಕ್ತಿಯ ಸಹೋದರನಿಗೆ ಅಲಹಾಬಾದ್ ಹೈಕೋರ್ಟ್ ಬಂಧನದಿಂದ ರಕ್ಷಣೆ ನೀಡಿದೆ.
ವ್ಯಾಪಾರಿಯ ಮನೆಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ್ದಾನೆಂದು ಆರೋಪಿಸಿ ಫರೀದ್ ಅಲಿಯಾಸ್ ಔರಂಗಜೇಬ್(35) ಅವರನ್ನು ಉದ್ರಿಕ್ತ ಗುಂಪೊಂದು ಥಳಿಸಿ ಹತ್ಯೆ ಮಾಡಿತ್ತು. ಘಟನೆಯ 11 ದಿನಗಳ ನಂತರ ಔರಂಗಜೇಬ್, ಆತನ ಸಹೋದರ ಝಾಕಿ ಮತ್ತು ಇತರ ಐವರ ವಿರುದ್ಧ ಲಕ್ಷ್ಮಿ ರಾಣಿ ಮಿತ್ತಲ್ ಎಂಬ ಮಹಿಳೆಯೊಬ್ಬರು ತನ್ನ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆಂದು ಎಫ್ಐಆರ್ ದಾಖಲಿಸಿದ್ದಾರೆ.
ಔರಂಗಜೇಬ್ ಹತ್ಯೆಯ ಆರೋಪದ ಮೇಲೆ ಲಕ್ಷ್ಮಿ ರಾಣಿ ಮಿತ್ತಲ್ ಅವರ ಪತಿಯನ್ನು ಕೂಡ ಬಂಧಿಸಲಾಗಿತ್ತು. ಹತ್ಯೆಯಾದ ದಿನ ಔರಂಗಜೇಬ್ ಮತ್ತು ಅವರ ಸಹಚರರು ನನ್ನ ಮನೆಯಲ್ಲಿ ದರೋಡೆ ನಡೆಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಹತ್ಯೆಯಾದ ಔರಂಗಜೇಬ್, ಝಾಕಿ ಮತ್ತು ಇತರರ ವಿರುದ್ಧ ಜೂ. 29ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 395ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಎಫ್ಐಆರ್ ನಲ್ಲಿ ಮೃತ ಔರಂಗಜೇಬ್ ಹೆಸರನ್ನು ಆರೋಪಿಯನ್ನಾಗಿ ಸೇರಿಸಿರುವುದರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಆಡಳಿತಾರೂಢ ಬಿಜೆಪಿ ವಿರುದ್ಧವೂ ವ್ಯಾಪಕವಾದ ಟೀಕೆಗೆ ಕಾರಣವಾಗಿತ್ತು.
ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರ ವಿಭಾಗೀಯ ಪೀಠವು ಝಾಕಿ ವಿರುದ್ಧ ಮುಂದಿನ ವಿಚಾರಣೆಯವರೆಗೆ ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳಬಾರದು ಎಂದು ಹೇಳಿದೆ.
ತನ್ನ ಮೃತ ಸಹೋದರ ಮತ್ತು ಇತರರ ವಿರುದ್ಧದ ದಾಖಲಾದ ಎಫ್ಐಆರ್ ಅನ್ನು ಪ್ರಶ್ನಿಸಿ ಝಾಕಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಔರಂಗಜೇಬ್ ಅವರ ಗುಂಪು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಮಿತ್ತಲ್ ದುರುದ್ದೇಶದಿಂದ ಎಫ್ಐಆರ್ ದಾಖಲಿಸಿದ್ದಾರೆ ಎಂದು ಝಾಕಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.