ಆರ್ಯ ಸಮಾಜದಿಂದ ಅಕ್ರಮ ವಿವಾಹಗಳ ಆರೋಪ : ತನಿಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

Update: 2024-09-14 15:31 GMT

ಅಲಹಾಬಾದ್ ಹೈಕೋರ್ಟ್ |  PC : PTI 

ಅಲಹಾಬಾದ್ : ಆರ್ಯ ಸಮಾಜವು ಕಾನೂನುಬಾಹಿರ ವಿವಾಹಗಳಿಗೆ ಅನುಕೂಲ ಕಲ್ಪಿಸುತ್ತಿದೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಮತ್ತು ಘಾಜಿಯಾಬಾದ್ ಪೋಲಿಸ್ ಆಯುಕ್ತರಿಗೆ ಆದೇಶಿಸಿದೆ.

ತನಿಖೆಯು ಆರ್ಯ ಸಮಾಜದ ಮಂದಿರಗಳು, ಸೊಸೈಟಿಗಳು, ಟ್ರಸ್ಟ್‌ ಗಳು ಮತ್ತು ಇತರ ಸಂಸ್ಥೆಗಳನ್ನೂ ಒಳಗೊಳ್ಳಲಿದೆ. ವಿವಾಹಿತ ದಂಪತಿಗಳು ತಮ್ಮ ಕುಟುಂಬಗಳಿಂದ ರಕ್ಷಣೆಯನ್ನು ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾ.ವಿನೋದ್ ದಿವಾಕರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಆರ್ಯ ಸಮಾಜದ ಅಧೀನದಲ್ಲಿರುವ ಕನಿಷ್ಠ 15 ಸಂಘಟನೆಗಳು ಅಕ್ರಮವಾಗಿ ವಿವಾಹಗಳನ್ನು ನೆರವೇರಿಸಿರುವುದು ಪೋಲಿಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸಂಘಟನೆಗಳು ದಿಲ್ಲಿಯಲ್ಲಿರುವ ಆರ್ಯ ಸಮಾಜದ ಪ್ರಧಾನ ಕಚೇರಿಯಲ್ಲಿ ಅಧಿಕೃವಾಗಿ ನೋಂದಣಿಗೊಂಡಿಲ್ಲ.

ಆರ್ಯ ಸಮಾಜದ ಸಂಘಟನೆಗಳು ನೀಡಿದ ಅಮಾನ್ಯ ವಿವಾಹ ಪ್ರಮಾಣಪತ್ರಗಳು ಹಾಗೂ ನಕಲಿ ದಾಖಲೆಗಳು ಮತ್ತು ತಪ್ಪು ವೈಯಕ್ತಿಕ ವಿವರಗಳ ಆಧಾರದಲ್ಲಿ ಈ ವಿವಾಹಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ನೋಂದಾಯಿಸಿಕೊಂಡಿದ್ದಾರೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾ.ದಿವಾಕರ್, ಬಾಲ್ಯವಿವಾಹ ತಡೆ ಕಾಯ್ದೆ ಮತ್ತು ಹಿಂದು ವಿವಾಹ ಕಾಯ್ದೆಗಳ ನಿಬಂಧನೆಗಳನ್ನು ಉಲ್ಲಂಘಿಸಿ ಮದುವೆಗಳನ್ನೂ ನೆರವೇರಿಸಲಾಗಿದೆ ಎಂದು ಬೆಟ್ಟು ಮಾಡಿದರು.

ಇಂತಹ ವಿವಾಹಗಳು ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ ಮತ್ತು ಬಲವಂತದ ದುಡಿಮೆಗೆ ಕಾರಣವಾಗುತ್ತವೆ. ಸಾಮಾಜಿಕ ಅಸ್ಥಿರತೆ, ಶೋಷಣೆ, ಬಲಾತ್ಕಾರ ಮತ್ತು ತಮ್ಮ ಶಿಕ್ಷಣಕ್ಕೆ ಅಡ್ಡಿಯಿಂದಾಗಿ ಮಕ್ಕಳು ಭಾವನಾತ್ಮಕ ಮತ್ತು ಮಾನಸಿಕ ಆಘಾತಕ್ಕೊಳಗಾಗುತ್ತಾರೆ. ದಾಖಲೆಗಳನ್ನು ಪರಿಶೀಲಿಸಲು ಹಾಗೂ ಟ್ರಸ್ಟ್‌ ಗಳು ಮತ್ತು ಸೊಸೈಟಿಗಳ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ನ್ಯಾಯಾಲಯವು ಹೇಳಿತು.

ವಿವಾಹಗಳನ್ನು ನೆರವೇರಿಸುವುದರಲ್ಲಿ ತೊಡಗಿಕೊಂಡಿರುವ ಆರ್ಯ ಸಮಾಜ ಮಂದಿರಗಳು ಮತ್ತು ಸೊಸೈಟಿಗಳು/ಟ್ರಸ್ಟ್‌ ಗಳ ಈ ಪಟ್ಟಿಯು ಕೇವಲ ಸಾಂಕೇತಿಕ ಸ್ವರೂಪದ್ದಾಗಿದೆ. ವಿವಾಹಗಳನ್ನು ನೆರವೇರಿಸುವುದರಲ್ಲಿ ಇಂತಹ ಇನ್ನೂ ಅನೇಕ ಸಂಸ್ಥೆಗಳು ತೊಡಗಿಕೊಂಡಿವೆ ಮತ್ತು ಅವುಗಳ ಚಟುವಟಿಕೆಗಳ ಕುರಿತೂ ಪೋಲಿಸರು ವಿಚಾರಣೆ ನಡೆಸುತ್ತಾರೆ ಎಂದು ಹೇಳಿದ ನ್ಯಾಯಾಲಯವು,ಮುಂದಿನ ವಿಚಾರಣಾ ದಿನಾಂಕವಾದ ಸೆ.26ಕ್ಕೆ ಮುನ್ನ ವರದಿಗಳನ್ನು ಸಲ್ಲಿಸುವಂತೆ ಪೋಲಿಸರಿಗೆ ಸೂಚಿಸಿದೆ. ಈ ವಿಷಯದಲ್ಲಿ ಒಟ್ಟು 46 ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News