ಕಿರುಕುಳ ನೀಡಿದ ಆರೋಪ: ಕೊಲಂಬಿಯಾ ವಿವಿಯ ಇಸ್ರೇಲ್ ಪರ ಪ್ರೊಫೆಸರ್ ಅಮಾನತು

Update: 2024-10-17 10:39 GMT
PC : aljazeera.com

ಹೊಸದಿಲ್ಲಿ: ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯು ತನ್ನ ನೀತಿಯನ್ನು ಉಲ್ಲಂಘಿಸಿ ವಿವಿಯ ಉದ್ಯೊಗಿಗಳಿಗೆ ಪದೇ ಪದೇ ಕಿರುಕುಳ ನೀಡಿದ ಮತ್ತು ಬೆದರಿಕೆಯೊಡ್ಡಿದ ಆರೋಪದಲ್ಲಿ ಇಸ್ರೇಲ್ ಪರ ಒಲವು ಹೊಂದಿರುವ ಪ್ರೊ.ಶಾಯ್ ದೇವಿಡಾಯ್ ಅವರನ್ನು ತಾತ್ಕಾಲಿವಾಗಿ ಅಮಾನತುಗೊಳಿಸಿದೆ.

ಬಿಸಿನೆಸ್ ಸ್ಕೂಲ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡೇವಿಡಾಯ್ ತನ್ನ ಆಕ್ರಮಣಕಾರಿ ನಿಲುವು, ಇಸ್ರೇಲ್ ಪರ ಪ್ರತಿಪಾದನೆ ಮತ್ತು ಫೆಲೆಸ್ತೀನ್ ಪರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಟೀಕೆಗಾಗಿ ಕ್ಯಾಂಪಸ್‌ನಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಸರಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ ಎನ್ನುವುದು ಡೇವಿಡಾಯ್ ಆರೋಪವಾಗಿದೆ.

ತನ್ನನ್ನು ತಾತ್ಕಾಲಿವಾಗಿ ಅಮಾನತುಗೊಳಿಸಿರುವುದನ್ನು ಮಂಗಳವಾರ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿರುವ ಡೇವಿಡಾಯ್,‘ಇನ್ನು ಮುಂದೆ ಕ್ಯಾಂಪಸ್‌ನಲ್ಲಿ ನನಗೆ ಅವಕಾಶ ನೀಡದಿರಲು ವಿವಿಯು ನಿರ್ಧರಿಸಿದೆ,ನನ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅ.೭ ಇದಕ್ಕೆ ಕಾರಣ,ದ್ವೇಷಪೂರಿತ ಗುಂಪನ್ನು ಎದುರಿಸಲು ನಾನು ಹೆದರುತ್ತಿರಲಿಲ್ಲ ಎನ್ನುವುದು ಇದಕ್ಕೆ ಕಾರಣ’ ಎಂದು ವೀಡಿಯೊದಲ್ಲಿ ಹೇಳಿದ್ದಾರೆ.

ಅ.೭ರಂದು ಫೆಲೆಸ್ತೀನ್ ಪರ ಕೊಲಂಬಿಯಾ ವಿವಿ ವರ್ಣಭೇದ ನೀತಿ ವಿರೋಧಿ ವಿದ್ಯಾರ್ಥಿ ಗುಂಪು ಪ್ರತಿಭಟನೆಯನ್ನು ನಡೆಸಿದ ಸಂದರ್ಭದಲ್ಲಿ ವಿವಿಯ ಸಾರ್ವಜನಿಕ ಸುರಕ್ಷತಾ ಅಧಿಕಾರಿಗಳೊಂದಿಗೆ ತನ್ನ ಸಂಭಾಷಣೆಗಳ ಹಲವಾರು ವೀಡಿಯೊಗಳನ್ನು ತಾನು ಆನ್‌ಲೈನ್ ಪೋಸ್ಟ್ ಮಾಡಿದ್ದಕ್ಕೆ ಪ್ರತೀಕಾರವಾಗಿ ತನ್ನನ್ನು ಅಮಾನತುಗೊಳಿಸಲಾಗಿದೆ ಎಂದು ಡೇವಿಡಾಯ್ ಹೇಳಿದ್ದಾರೆ. ತಾನು ಎಲ್ಲಿಗೂ ಹೋಗುವುದಿಲ್ಲ ಮತ್ತು ತನ್ನ ಅಮಾನತು ಕುರಿತು ವಿವಿಯ ವಿರುದ್ಧ ದಾವೆ ಹೂಡುತ್ತೇನೆ ಎಂದಿದ್ದಾರೆ.

ಕೊಲಂಬಿಯಾ ಡೇವಿಡಾಯ್ ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸದಾ ಗೌರವಿಸಿದೆ. ಅವರ ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಿರಲಿಲ್ಲ ಮತ್ತು ಈಗಲೂ ನಿರ್ಬಂಧಿಸಿಲ್ಲ. ಆದರೆ ಬೆದರಿಕೆಯೊಡ್ಡುವ,ಕಿರುಕುಳ ನೀಡುವ ತನ್ನ ಉದ್ಯೊಗಿಗಳ ವರ್ತನೆಯನ್ನು ಅದು ಸಹಿಸುವುದಿಲ್ಲ. ಡೇವಿಡಾಯ್ ಅವರ ಕ್ಯಾಂಪಸ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ,ಆದರೆ ಅಮಾನತು ಅವರ ಪರಿಹಾರ ಅಥವಾ ಬೋಧಕ ವೃಂದದ ಸದಸ್ಯರಾಗಿ ಅವರ ಸ್ಥಾನಮಾನದ ಮೇಲೆ ಪರಿಣಾಮ ಬೀರುವುದಿಲ್ಲ. ಕ್ಯಾಂಪಸ್‌ನ ಹೊರಗೆ ಅವರಿಗೆ ಪರ್ಯಾಯ ಕಚೇರಿಯನ್ನು ನೀಡಲಾಗಿದೆ. ಅವರು ತನ್ನನ್ನು ತಿದ್ದಿಕೊಂಡರೆ ಮತ್ತು ವಿವಿಯ ನೀತಿಗಳನ್ನು ಅರ್ಥ ಮಾಡಿಕೊಂಡರೆ ಅವರನ್ನು ಮತ್ತೆ ಕ್ಯಾಂಪಸ್‌ಗೆ ಕರೆದುಕೊಳ್ಳಲಾಗುವುದು ಎಂದು ವಿವಿಯು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News