ಮುಂಬೈಗೆ ಆಗಮಿಸುತ್ತಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ; ವಾರದಲ್ಲಿ 13ನೇ ಪ್ರಕರಣ
ಮುಂಬೈ: ಫ್ರಾಂಕ್ ಫರ್ಟ್ ನಿಂದ ಮುಂಬೈಗೆ ಆಗಮಿಸುತ್ತಿದ್ದ ವಿಸ್ತಾರ ವಿಮಾನಕ್ಕೆ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆ ಬಂದಿದೆ ಎಂದು ವಿಸ್ತಾರ ವಿಮಾನ ಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ವಿಮಾನವು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡುತ್ತಿದ್ದಂತೆಯೆ, ಆ ವಿಮಾನವನ್ನು ಪ್ರತ್ಯೇಕ ನಿಲ್ದಾಣಕ್ಕೆ ಕರೆದೊಯ್ದು ಪರಿಶೀಲನೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ಸ್ವೀಕರಿಸಿರುವ 13ನೇ ಬಾಂಬ್ ಬೆದರಿಕೆ ಇದಾಗಿದೆ. ಬಾಂಬ್ ಬೆದರಿಕೆಯ ಗುರಿಯಾಗಿದ್ದ ವಿಮಾನಗಳ ಪೈಕಿ ಏರ್ ಇಂಡಿಯಾ, ಇಂಡಿಗೊ ಹಾಗೂ ಆಕಾಸ ಏರ್ ವಿಮಾನಗಳು ಸೇರಿದ್ದವು.
ಯುಕೆ 028 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳು ಸುರಕ್ಷಿತರಾಗಿದ್ದು, ಬಾಂಬ್ ಬೆದರಿಕೆಯ ಕುರಿತು ಎಲ್ಲ ಸಂಬಂಧಿತ ಪ್ರಾಧಿಕಾರಗಳಿಗೆ ತಕ್ಷಣವೇ ಮಾಹಿತಿ ನೀಡಲಾಗಿತ್ತು” ಎಂದು ವಿಸ್ತಾರ ವಿಮಾನ ಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ನಾವು ಕಡ್ಡಾಯ ಭದ್ರತಾ ತಪಾಸಣೆಗೆ ಭದ್ರತಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ವಿಸ್ತಾರದಲ್ಲಿ, ನಮ್ಮ ಗ್ರಾಹಕರು, ವಿಮಾನ ಸಿಬ್ಬಂದಿಗಳು ಹಾಗೂ ವಿಮಾನದ ಭದ್ರತೆ ನಮಗೆ ಅತ್ಯಂತ ಮುಖ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಬುಧವಾರದಂದು ಆಕಾಸ ಏರ್ ಮತ್ತು ಇಂಡಿಗೊ ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿದ್ದವು. ನಂತರ ಅವು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಟ್ಟಿತ್ತು.