ತ್ರಿವರ್ಣ ಧ್ವಜಕ್ಕೆ 21 ಬಾರಿ ನಮಸ್ಕರಿಸಿ, ʼಭಾರತ್ ಮಾತಾ ಕಿ ಜೈʼ ಎಂದು ಘೋಷಣೆ ಕೂಗುವಂತೆ ಸೂಚಿಸಿ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್

Update: 2024-10-17 07:35 GMT

ಸಾಂದರ್ಭಿಕ ಚಿತ್ರ 

ಜಬಲ್ಪುರ್: ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿಯೊಬ್ಬನಿಗೆ 21 ಬಾರಿ ತ್ರಿವರ್ಣ ಧ್ವಜಕ್ಕೆ ವಂದಿಸುವಂತೆ ಹಾಗೂ ವಿಚಾರಣೆ ಮುಕ್ತಾಯವಾಗುವವರೆಗೂ ಭೋಪಾಲ್ ಪೊಲೀಸ್ ಠಾಣೆಯಲ್ಲಿ ತಿಂಗಳಲ್ಲಿ ಎರಡು ಬಾರಿ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗುವಂತೆ ಸೂಚಿಸಿ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಆರೋಪಿಗೆ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದ್ದು, ಅದರಿಂದ ಆತ ತಾನು ಹುಟ್ಟಿರುವ ಮತ್ತು ವಾಸಿಸುತ್ತಿರುವ ದೇಶದ ಬಗ್ಗೆ ಹೊಣೆಗಾರಿಕೆ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬಹುದಾಗಿದೆ ಎಂದು ಮಂಗಳವಾರ ನೀಡಿರುವ ತಮ್ಮ ಆದೇಶದಲ್ಲಿ ನ್ಯಾ. ಡಿ.ಕೆ.ಪಾಲಿವಾಲ್ ಅಭಿಪ್ರಾಯ ಪಟ್ಟಿದ್ದಾರೆ.

“ತಾನು ಹುಟ್ಟಿ ಬೆಳೆದ ದೇಶದ ವಿರುದ್ಧವೇ ಆತ ಬಹಿರಂಗವಾಗಿ ಘೋಷಣೆ ಕೂಗುತ್ತಿದ್ದಾನೆ” ಎಂದೂ ಹೈಕೋರ್ಟ್ ಹೇಳಿದೆ.

ರಾಷ್ಟ್ರ ಧ್ವಜಕ್ಕೆ ವಂದಿಸಬೇಕು ಹಾಗೂ ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೆ ಮಂಗಳವಾರದಂದು ‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ಕೂಗಬೇಕು ಎಂದು ನ್ಯಾಯಾಲಯವು ಆರೋಪಿಗೆ ನಿರ್ದೇಶನ ನೀಡಿದೆ.

ಆರೋಪಿ ಫೈಝಲ್ ಅಲಿಯಾಸ್ ಫೈಝಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ರಡಿ ಕಳೆದ ಮೇ ತಿಂಗಳಲ್ಲಿ ಭೋಪಾಲ್ ನ ಮಿಸ್ರೋದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ನಂತರ, ಆತನನ್ನು ಬಂಧಿಸಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News