ಸುಪ್ರೀಂಕೋರ್ಟ್ ಎದುರು ನ್ಯಾಯ ದೇವತೆಯ ಹೊಸ ಪ್ರತಿಮೆ: ಏನಿದರ ವಿಶೇಷತೆ ಗೊತ್ತೇ?
ಹೊಸದಿಲ್ಲಿ: ಸುಪ್ರೀಂಕೋರ್ಟ್ ನಲ್ಲಿ ಅನಾವರಣ ಮಾಡಿರುವ ನೂತನ ಪ್ರತಿಮೆಯಲ್ಲಿ ನ್ಯಾಯದೇವತೆ ಕಣ್ಣಿಗೆ ಕಪ್ಪುಬಟ್ಟೆ ಧರಿಸಿರುವ ಮತ್ತು ಖಡ್ಗ ಹಿಡಿದಿರುವ ದೃಶ್ಯ ಮಾಯವಾಗಿದೆ. ಹೊಸ ಪ್ರತಿಮೆಯಲ್ಲಿ ನ್ಯಾಯದೇವತೆ ಕಣ್ಣು ತೆರೆದುಕೊಂಡಿದ್ದಾಳೆ ಹಾಗೂ ಎಡಗೈಯಲ್ಲಿ ಭಾರತದ ಸಂವಿಧಾನದ ಪ್ರತಿ ಹಿಡಿದುಕೊಂಡಿದ್ದಾಳೆ. ಆದರೆ ಬಲಗೈಯಲ್ಲಿರುವ ನ್ಯಾಯದ ತಕ್ಕಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ!
ಸಾಮ್ರಾಜ್ಯಶಾಹಿ ಆಡಳಿತದ ಅವಧಿಯ ಈ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರುತ್ತಿತ್ತು. ಕೈಯಲ್ಲಿ ಆಕೆ ಹಿಡಿದಿದ್ದ ಖಡ್ಗ, ಅನ್ಯಾಯವನ್ನು ತಡೆಯುವ ಆಕೆಯ ಅಧಿಕಾರ ಹಾಗೂ ಶಕ್ತಿಯ ಪ್ರತೀಕವಾಗಿತ್ತು.
ಬ್ರಿಟಿಷ್ ಪರಂಪರೆಯಿಂದ ಭಾರತ ಮುಂದಕ್ಕೆ ಚಲಿಸಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಬದಲಾವಣೆಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದು, ಅವರ ಪ್ರಕಾರ, ಕಾನೂನು ಎಂದೂ ಕುರುಡಾಗಿರಲು ಸಾಧ್ಯವಿಲ್ಲ. ಅದು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ.
"ನ್ಯಾಯದೇವತೆ ಕೈಯಲ್ಲಿ ಖಡ್ಗದ ಬದಲು ಸಂವಿಧಾನವನ್ನು ಹಿಡಿದಿರಬೇಕು. ಈ ಮೂಲಕ ಸಂವಿಧಾನದ ಮೂಲಕವೇ ಆಕೆ ನ್ಯಾಯದಾನ ಮಾಡುತ್ತಾಳೆ ಎನ್ನುವ ಸಂದೇಶ ದೇಶಕ್ಕೆ ತಲುಪಬೇಕು ಎನ್ನುವುದು ಅವರ ಆಶಯ" ಎಂದು ಮೂಲಗಳು ಸ್ಪಷ್ಟಪಡಿಸಿವೆ. ಖಡ್ಗ ಹಿಂಸೆಯ ಪ್ರತೀಕವಾಗಿದ್ದು, ನ್ಯಾಯಾಲಯಗಳು ಸಂವಿಧಾನದ ಕಾನೂನುಗಳ ಅನ್ವಯ ನ್ಯಾಯದಾನ ಮಡುತ್ತವೆ ಎನ್ನುವುದು ಸಿಜೆಐಯವರ ಸಮರ್ಥನೆ.