ಭಾರತ-ಕೆನಡಾ ನಡುವಿನ ಸಂಬಂಧ ಹದಗೆಡಲು ಟ್ರೂಡೊ ನೇರ ಹೊಣೆ: ವಿದೇಶಾಂಗ ಸಚಿವಾಲಯ

Update: 2024-10-17 07:10 GMT

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (PTI)

ಹೊಸದಿಲ್ಲಿ: ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರದ ಬಳಿ ಗುಪ್ತಚರ ವರದಿ ಹೊರತುಪಡಿಸಿ ಯಾವುದೇ ಪುರಾವೆ ಇಲ್ಲ ಎಂದು ಒಪ್ಪಿಕೊಂಡಿರುವ ಬಗ್ಗೆ ಭಾರತ ಗುರುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಕೆನಡಾದ ಆರೋಪಕ್ಕೆ ಸಂಬಂಧಿಸಿದಂತೆ ನಾವು ನಿರಂತರವಾಗಿ ಸಾಕ್ಷ್ಯಗಳನ್ನು ಕೇಳುತ್ತಿದ್ದೆವು. ನಮಗೆ ಇಂದು ಉತ್ತರ ಸಿಕ್ಕಿದೆ. ಕೆನಡಾವು ಭಾರತ ಮತ್ತು ಭಾರತೀಯರ ವಿರುದ್ಧ ಮಾಡಿದ ಗಂಭೀರ ಆರೋಪಗಳಿಗೆ ಯಾವುದೇ ಪುರಾವೆಗಳನ್ನು ನಮಗೆ ಒದಗಿಸಿಲ್ಲ" ಎಂದರು.

ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಉಂಟಾದ ಹಾನಿಗೆ ಸಂಪೂರ್ಣವಾಗಿ ಟ್ರೂಡೊ ಅವರೇ ಜವಾಬ್ದಾರಿ ಎಂದು ಜೈಸ್ವಾಲ್ ಹೇಳಿದರು.

ಕೆನಡಾ ಪ್ರಧಾನಿ ಟ್ರೂಡೊ ಅವರು ಸಾಕ್ಷ್ಯಗಳನ್ನು ನೀಡುವ ಮೊದಲೇ ಭಾರತ ಸರ್ಕಾರದ ಮೇಲೆ ಬಹಿರಂಗ ಆರೋಪ ಮಾಡಿದ್ದಾರೆ. ಈಗ ಅವರ ಆರೋಪವನ್ನು ಋಜುವಾತು ಪಡಿಸಲು ಅವರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ವು ಹೇಳಿದೆ.

ಭಾರತ ಸರಕಾರವು ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಒದಗಿಸಿ ಎಂದು ಕೆನಡಾ ಸರ್ಕಾರಕ್ಕೆ ಆರಂಭದಲ್ಲಿಯೇ ಹೇಳಿತ್ತು. ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಬಳಿಕ ಬಿಗಡಾಯಿಸಿತ್ತು.

ನಿನ್ನೆ ಈ ಕುರಿತು ಹೇಳಿಕೆ ನೀಡಿರುವ ಕೆನಡಾ ಪ್ರಧಾನಿ ಟ್ರುಡೋ ಕಳೆದ ವರ್ಷ ನಿಜ್ಜರ್‌ನ ಹತ್ಯೆಗೆ ಸಂಬಂಧಿಸಿದಂತೆ ತನ್ನ ಸರ್ಕಾರದ ಗುಪ್ತಚರ ಸಾಕ್ಷ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಗುಪ್ತಚರ ಮಾಹಿತಿ ಅನುಸರಿಸಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಶಾಮೀಲಾಗಿದ್ದಾರೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News