ಹಿಂಗಾರು ಬಿತ್ತನೆಗೆ ಮುನ್ನ ಆರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ

Update: 2024-10-17 05:48 GMT

PC: PTI

ಹೊಸದಿಲ್ಲಿ: ಹಿಂಗಾರು ಬಿತ್ತನೆ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ಆರು ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ಸಾಸಿವೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ 300 ರೂಪಾಯಿ ಹೆಚ್ಚಿದ್ದು, ಮಸೂರದ ಬೆಂಬಲ ಬೆಲೆ 275 ರೂಪಾಯಿ ಹಾಗೂ ಗೋಧಿ ಬೆಂಬಲಬೆಲೆಯನ್ನು ಕ್ವಿಂಟಾಲ್ ಗೆ 150 ರೂಪಾಯಿಯಷ್ಟು ಹೆಚ್ಚಿಸಲಾಗಿದೆ.

ಈ ಹೆಚ್ಚಳದಿಂದಾಗಿ ಮುಂದಿನ ಏಪ್ರಿಲ್ 1 ರಿಂದ ಆರಂಭವಾಗುವ 2025-26ನೇ ಮಾರಾಟ ಸೀಸನ್ ನಲ್ಲಿ ಸಾಸಿವೆ ಮತ್ತು ಹರಳು, ಮಸೂರ, ಗೋಧಿ ಹಾಗೂ ಕಡಲೆಯ ಕನಿಷ್ಠ ಬೆಂಬಲ ಬೆಲೆ ಅನುಕ್ರಮವಾಗಿ ಕ್ವಿಂಟಾಲ್ ಗೆ ರೂ. 5950, 6700, 2425, ಮತ್ತು 5650 ರೂಪಾಯಿ ಆಗಲಿದೆ. ಈ ಬೆಂಬಲ ಬೆಲೆ ಹೆಚ್ಚಳದಿಂದ ಸರ್ಕಾರಿ ಬೊಕ್ಕಸಕ್ಕೆ 87657 ಕೋಟಿ ರೂಪಾಯಿ ಹೊರೆಯಾಗಲಿದೆ.

ಸಾಸಿವೆ ಮತ್ತು ಹರಳು ಹಾಗೂ ಮಸೂರ ಧಾನ್ಯ ಅತಿಹೆಚ್ಚು ಏರಿಕೆಯನ್ನು ಪಡೆದಿದ್ದು, ಎಣ್ಣೆಬೀಜಗಳು ಮತ್ತು ಬೇಳೆಕಾಳುಗಳ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಗಮನ ಹರಿಸಿರುವುದಕ್ಕೆ ಪೂರಕವಾಗಿ ಈ ಏರಿಕೆ ಮಾಡಲಾಗಿದೆ. ಆದರೆ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಗೋಧಿ ಬೆಳೆ ಶೇಕಡಾವಾರು ಅತ್ಯಧಿಕ ಪ್ರತಿಫಲವನ್ನು ಪಡೆಯಲಿದೆ.

ಗೋಧಿ ಬೆಳೆಯುವುದರಿಂದ ರೈತರು ಉತ್ಪಾದನಾ ವೆಚ್ಚದ ಶೇಕಡ 105ರಷ್ಟು ಪ್ರತಿಫಲ ಪಡೆದರೆ, ಹರಳು ಮತ್ತು ಸಾಸಿವೆಯಲ್ಲಿ ಶೇಕಡ 98, ಮಸೂರದಲ್ಲಿ ಶೇಕಡ 89, ಕಡಲೆ ಮತ್ತು ಬಾರ್ಲಿಯಲ್ಲಿ ಶೇಕಡ 60, ಸೂರ್ಯಕಾಂತಿಯಲ್ಲಿ ಶೇಕಡ 50ರಷ್ಟು ಲಾಭ ಪಡೆಯುತ್ತಾರೆ. ಬಾರ್ಲಿ ಹಾಗೂ ಗೋಧಿ ಬೆಳೆಯ ಎಂಎಸ್ಪಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಂಗಾಮಿನಲ್ಲಿ ಕ್ರಮವಾಗಿ ಶೇಕಡ 7 ಮತ್ತು 6.6ರಷ್ಟು ಹೆಚ್ಚಳವಾಗಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News