ಮದ್ರಸಗಳನ್ನು ಮುಚ್ಚುವಂತೆ ಎಂದೂ ಸೂಚಿಸಿರಲಿಲ್ಲ: ಎನ್‌ಸಿಪಿಸಿಆರ್ ಸ್ಪಷ್ಟಣೆ

Update: 2024-10-17 10:45 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮದ್ರಸಗಳನ್ನು ಮುಚ್ಚುವಂತೆ ತಾನು ಕರೆ ನೀಡಿರಲಿಲ್ಲ, ಆದರೆ ಮುಸ್ಲಿಮ್ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದರಿಂದ ಈ ಸಂಸ್ಥೆಗಳು ಸ್ವೀಕರಿಸುವ ಸರಕಾರಿ ಅನುದಾನವನ್ನು ನಿಲ್ಲಿಸುವಂತೆ ಮಾತ್ರ ಸೂಚಿಸಿದ್ದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಅವರು ಸ್ಪಷ್ಟಪಡಿಸಿದ್ದಾರೆ.

ಸಮಾನ ಶೈಕ್ಷಣಿಕ ಅವಕಾಶಗಳಿಗೆ ಕರೆ ನೀಡಿದ ಅವರು ಬಡ ಹಿನ್ನೆಲೆಯ ಮುಸ್ಲಿಮ್ ಮಕ್ಕಳಿಗೆ ಜಾತ್ಯತೀತ ಶಿಕ್ಷಣವನ್ನು ಒದಗಿಸುವ ಬದಲು ಧಾರ್ಮಿಕ ಶಿಕ್ಷಣ ಪಡೆಯುವಂತೆ ಅವರ ಮೇಲೆ ಒತ್ತಡವನ್ನು ಹೇರಲಾಗುತ್ತಿದೆ ಎಂದು ಪ್ರತಿಪಾದಿಸಿದರು.

‘ಶ್ರೀಮಂತ ಕುಟುಂಬಗಳಿಗೆ ಸೇರಿದ ಮಕ್ಕಳು ಧಾರ್ಮಿಕ ಮತ್ತು ನಿಯಮಿತ ಶಿಕ್ಷಣವನ್ನು ಪಡೆಯುತ್ತಾರೆ,ಬಡತನದ ಹಿನ್ನೆಲೆಯ ಮಕ್ಕಳಿಗೂ ಅದನ್ನು ಒದಗಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ. ನಮ್ಮ ಬಡ ಮುಸ್ಲಿಮ್ ಮಕ್ಕಳನ್ನು ಶಾಲೆಗಳಿಗೆ ಬದಲಾಗಿ ಮದ್ರಸಗಳಿಗೆ ಹಾಜರಾಗುವಂತೆ ನಾವೇಕೆ ನಿರ್ಬಂಧಿಸುತ್ತಿದ್ದೇವೆ? ಇದು ಅವರ ಪಾಲಿಗೆ ನ್ಯಾಯಯುತವಲ್ಲ’ ಎಂದು ಹೇಳಿದ ಕನುಂಗೋ,ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ,ಸರಕಾರವು ತನ್ನ ಬಾಧ್ಯತೆಗಳತ್ತ ಕಣ್ಣು ಮುಚ್ಚಿಕೊಂಡಿರುವಂತಿಲ್ಲ ಎಂದರು.

ಮದ್ರಸಗಳಿಗೆ ಧನಸಹಾಯವನ್ನು ನಿಲ್ಲಿಸುವಂತೆ ಸೂಚಿಸಿ ಅ.೧೧ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದ್ದ ಕನುಂಗೋ,ಮದ್ರಸದಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ ಮಾನ್ಯತೆ ಪಡೆದಿರುವ ಶಾಲೆಗಳಿಗೆ ದಾಖಲಿಸಬೇಕು ಎಂದು ಹೇಳಿದ್ದರು.

ಕನುಂಗೋ ತನ್ನ ಪತ್ರದಲ್ಲಿ ಮಾಡಿರುವ ಶಿಫಾರಸುಗಳು ಮಕ್ಕಳದ ಶಿಕ್ಷಣದ ಹಕ್ಕುಗಳನ್ನು ಉಲ್ಲಂಘಿಸುವಲ್ಲಿ ಮದ್ರಸಗಳ ಪಾತ್ರವನ್ನು ನಿರ್ಧರಿಸಲು ಆಯೋಗವು ಸಿದ್ಧಪಡಿಸಿದ್ದ ವರದಿಯನ್ನು ಆಧರಿಸಿವೆ.

ಕೆಲವು ಗುಂಪುಗಳು ಮುಸ್ಲಿಮ್ ಸಮುದಾಯದ ಸಬಲೀಕರಣದ ಬಗ್ಗೆ ಭಯಪಟ್ಟುಕೊಂಡಿವೆ ಎಂದು ಹೇಳಿದ ಕನುಂಗೋ,ಸಶಕ್ತ ಸಮುದಾಯಗಳು ಉತ್ತರದಾಯಿತ್ವ ಮತ್ತು ಸಮಾನ ಹಕ್ಕುಗಳಿಗೆ ಆಗ್ರಹಿಸುತ್ತವೆ ಎನ್ನುವ ನಿರೀಕ್ಷೆ ಈ ಭಯಕ್ಕೆ ಕಾರಣವಾಗಿದೆ. ಎಲ್ಲರನ್ನೂ ಒಳಗೊಂಡ ಶೈಕ್ಷಣಿಕ ಸುಧಾರಣೆಗಳ ತಡೆಗೆ ಈ ಭಯವು ಮುಖ್ಯ ಕಾರಣವಾಗಿದೆ. ಇದರ ಪರಿಣಾಮವಾಗಿ ಉನ್ನತ ಶಿಕ್ಷಣದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಪ್ರಾತಿನಿಧ್ಯ ಕಡಿಮೆಯಾಗಿದೆ. ಮುಸ್ಲಿಮರಿಗೆ ಹೋಲಿಸಿದರೆ ದುರ್ಬಲ ವರ್ಗಗಳಿಗೆ ಸೇರಿದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು.

ಮದ್ರಸಗಳನ್ನು ಸಾಮಾನ್ಯ ಶಾಲೆಗಳೊಂದಿಗೆ ಸಂಯೋಜಿಸಬೇಕು ಎಂದೂ ಕನುಂಗೋ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News