ಮಧ್ಯಪ್ರದೇಶ | ಕಿರುಕುಳದ ವಿರುದ್ಧ ದೂರು ನೀಡಿದ ದಲಿತ ಯುವತಿಗೆ ಬೆಂಕಿ ಹಚ್ಚಿದ ಆರೋಪಿಯ ಪುತ್ರ

Update: 2024-10-17 08:49 GMT

ಸಾಂದರ್ಭಿಕ ಚಿತ್ರ

ಭೋಪಾಲ್ : ಮಧ್ಯಪ್ರದೇಶದ ಖಾಂಡ್ವಾ ಬಳಿಯ ಹಳ್ಳಿಯೊಂದರಲ್ಲಿ ಕಿರುಕುಳದ ವಿರುದ್ಧ ದೂರು ನೀಡಿದ ದಲಿತ ಯುವತಿಗೆ ಆರೋಪಿಯ ಪುತ್ರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.

19 ವರ್ಷದ ದಲಿತ ಯುವತಿಯು ತನ್ನ ಗ್ರಾಮದ ನಿವಾಸಿ 48 ವರ್ಷದ ಮಂಗೀಲಾಲ್ ಎಂಬಾತನ ಮೇಲೆ ತನಗೆ ಕಿರುಕುಳ ನೀಡಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಿದ್ದರು.

ಹೊಲದಲ್ಲಿ ಒಬ್ಬಂಟಿಯಾಗಿರುವಾಗ ಮಂಗೀಲಾಲ್ ತನಗೆ ಕಿರುಕುಳ ನೀಡಿ ಹಲ್ಲೆಗೆ ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಅಕ್ಟೋಬರ್ 7 ರಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಂಗೀಲಾಲ್ ನನ್ನು ಪೊಲೀಸರು ಅದೇ ದಿನ ಬಂಧಿಸಿದ್ದರು. ಮರುದಿನ, ಅಕ್ಟೋಬರ್ 8 ರಂದು ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದ ನಂತರ ಯುವತಿಯ ಕುಟುಂಬಕ್ಕೆ ಆರೋಪಿಯ ಕಡೆಯಿಂದ ಬೆದರಿಕೆ ಹಾಕಲಾಯಿತು ಎಂದು ತಿಳಿದು ಬಂದಿದೆ.

ಮಂಗೀಲಾಲ್ ನ ಮಗ ಅರ್ಜುನ್ ಯುವತಿಯ ಮನೆಗೆ ನುಗ್ಗಿ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಎನ್ನಲಾಗಿದೆ. ಅದೃಷ್ಟವಶಾತ್ ಯುವತಿಯು ಆರೋಪಿಯಿಂದ ತಪ್ಪಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇ. 27 ರಷ್ಟು ಸುಟ್ಟ ಗಾಯಗಳಾಗಿರುವ ಯುವತಿಯನ್ನು ಇಂದೋರ್‌ನ ಆಸ್ಪತ್ರೆಗೆ ವರ್ಗಾಯಿಸುವ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅರ್ಜುನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನದ ಆರೋಪ ದಾಖಲಾಗಿದೆ.

"ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ. ಯುವತಿಯ ಹೇಳಿಕೆಯು ನಿರ್ಣಾಯಕವಾಗಿರುತ್ತದೆ", ಎಂದು ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ರಾಯ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News