ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್ ಖನ್ನಾ ಹೆಸರು ಶಿಫಾರಸು
ಹೊಸದಿಲ್ಲಿ: ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ಸುಪ್ರೀಂಕೋರ್ಟ್ ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶ ಸಂಜೀವ್ ಖನ್ನಾ ಅವರ ಹೆಸರನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶಿಫಾರಸು ಮಾಡಿದ್ದಾರೆ.
ಈ ಶಿಫಾರಸನ್ನು ಕೇಂದ್ರ ಸರಕಾರ ಅಂಗೀಕರಿಸಿದರೆ ನ್ಯಾ.ಸಂಜೀವ್ ಖನ್ನಾ ಭಾರತದ ಸುಪ್ರೀಂ ಕೋರ್ಟ್ ನ 51ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಅವರ ಸೇವಾವಧಿ ಇನ್ನು ಆರು ತಿಂಗಳು ಇರಲಿದ್ದು, ಮೇ 13, 2025ರಂದು ನಿವೃತ್ತರಾಗಲಿದ್ದಾರೆ.
ನವೆಂಬರ್ 10ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನಿವೃತ್ತರಾಗಲಿದ್ದು, ಒಡಂಬಡಿಕೆಯ ಪ್ರಕಾರ, ನಿಮ್ಮ ಉತ್ತರಾಧಿಕಾರಿಯ ಹೆಸರನ್ನು ಸೂಚಿಸುವಂತೆ ಕಳೆದ ವಾರ ಕೇಂದ್ರ ಸರಕಾರ ಅವರಿಗೆ ಪತ್ರ ಬರೆದಿತ್ತು.
ನ್ಯಾ. ಸಂಜೀವ್ ಖನ್ನಾ 1983ರಲ್ಲಿ ಬಾರ್ ಕೌನ್ಸಿಲ್ ಆಫ್ ದಿಲ್ಲಿಯಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು. ಅವರು ಮೊದಲಿಗೆ ತೀಸ್ ಹಝಾರಿ ಸಂಕೀರ್ಣದಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ವಕೀಲಿಕೆ ವೃತ್ತಿ ನಡೆಸುತ್ತಿದ್ದರು. ನಂತರ ಅವರು ದಿಲ್ಲಿ ಹೈಕೋರ್ಟ್ ಹಾಗೂ ನ್ಯಾಯಾಧಿಕರಣಗಳ ವಕೀಲರಾಗಿ ವೃತ್ತಿ ನಿರ್ವಹಿಸತೊಡಗಿದರು.
2004 ರಲ್ಲಿ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸ್ಥಾಯಿ ಸಲಹೆಗಾರರಾಗಿ (ಸಿವಿಲ್) ನೇಮಕಗೊಂಡಿದ್ದರು. ಅವರು ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ಸಲಹೆಗಾರರಾಗಿ ಸುದೀರ್ಘ ಅವಧಿಗೆ ಕಾರ್ಯ ನಿರ್ವಹಿಸಿದ್ದಾರೆ.
ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಅಮಿಕಸ್ ಕ್ಯೂರಿಯಾಗಿ ದಿಲ್ಲಿ ಹೈಕೋರ್ಟ್‌ನಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.
ಸಂಜೀವ್ ಖನ್ನಾ 2005 ರಲ್ಲಿ ದಿಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಸೇರ್ಪಡೆಯಾದರು. 2006 ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾಗ ದಿಲ್ಲಿಯ ನ್ಯಾಯಾಂಗ ಅಕಾಡೆಮಿ, ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳ ಪ್ರಭಾರ ಅಧ್ಯಕ್ಷ ಸ್ಥಾನವನ್ನೂ ಹೊಂದಿದ್ದರು.
ಖನ್ನಾ ಅವರನ್ನು ಜನವರಿ 18, 2019 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಗಿಯಿತು. ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುವುದಕ್ಕಿಂತ ಮುಂಚೆಯೇ ಸುಪ್ರೀಂ ಕೋರ್ಟ್‌ಗೆ ನೇಮಿಸಲ್ಪಟ್ಟ ಕೆಲವೇ ನ್ಯಾಯಮೂರ್ತಿಗಳಲ್ಲಿ ಸಂಜೀವ್ ಖನ್ನಾ ಕೂಡ ಒಬ್ಬರು.