ಪೋಲಿಸರ ಮೇಲೆ ದಾಳಿಗೆ ಪ್ರಚೋದನೆ ಆರೋಪ: ಬಿಜೆಪಿ ಸಂಸದ ಸೇರಿದಂತೆ 17 ಜನರ ವಿರುದ್ಧ ಪ್ರಕರಣ

Update: 2023-10-27 16:39 GMT

ಬಿಜೆಪಿ ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲ್ Photo: instagram/sigriwalbjp

ಪಾಟ್ನಾ: ಬಿಹಾರದ ಸರಣ್ ಜಿಲ್ಲೆಯಲ್ಲಿ ಡಿಜೆ ಮತ್ತು ಧ್ವನಿವರ್ಧಕಗಳನ್ನು ಅಳವಡಿಸಿದ್ದ ವಾಹನಗಳನ್ನು ಪೋಲಿಸ್ ವಶದಿಂದ ಬಿಡುಗಡೆಗೊಳಿಸಲು ಪೋಲಿಸರ ಮೇಲೆ ದಾಳಿಗೆ ಗುಂಪನ್ನು ಪ್ರಚೋದಿಸಿದ್ದ ಆರೋಪದಲ್ಲಿ ಮಹಾರಾಜಗಂಜ್ ಬಿಜೆಪಿ ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲ್ ಮತ್ತು ಇತರ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಶುಕ್ರವಾರ ಬೆಳಿಗ್ಗೆ ಸರಣ್ ಜಿಲ್ಲೆಯ ಭಗವಾನ ಬಜಾರ್ ಪೋಲಿಸ್ ಠಾಣಾ ವ್ಯಾಪ್ತಿಯ ನಯಿ ಬಜಾರ್‌ನಲ್ಲಿ ದುರ್ಗಾದೇವಿಯ ವಿಗ್ರಹದ ವಿಸರ್ಜನೆ ಸಂದರ್ಭ ಘಟನೆ ನಡೆದಿತ್ತು. ಶೋಭಾಯಾತ್ರೆಯಲ್ಲಿ ಡಿಜೆಯ ಅಬ್ಬರ ಕುರಿತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಇಟ್ಟಿಗೆ ತೂರಾಟದಿಂದ ಆರಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಸ್ಥಳಕ್ಕೆ ಧಾವಿಸಿದ್ದ ಪೋಲಿಸರು ಡಿಜೆ ಮತ್ತು ಧ್ವನಿವರ್ಧಕ ಅಳವಡಿಸಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ್ದ ಸಗ್ರಿವಾಲ್ ವಾಹನಗಳನ್ನು ಬಿಡಿಸಕೊಳ್ಳಲು ಗುಂಪನ್ನು ಪ್ರಚೋದಿಸಿದ್ದರು ಎಂದು ಪೋಲಿಸರು ಆರೋಪಿಸಿದ್ದಾರೆ.

ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಹೆಚ್ಚುವರಿ ಪೋಲಿಸ್ ಪಡೆಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಕೇಂದ್ರವಾದ ಛಾಪ್ರಾದಲ್ಲಿ ರವಿವಾರದವರೆಗೆ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ.

ಘರ್ಷಣೆಯಲ್ಲಿ ಕಲ್ಲು ತೂರಾಟದಿಂದ ಓರ್ವ ಪೋಲಿಸ್ ಸಿಬ್ಬಂದಿಗೂ ಗಾಯಗಳಾಗಿವೆ. ಪೋಲಿಸರು ವಿಚಾರಣೆಗಾಗಿ 10 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News