8 ವರ್ಷಗಳಲ್ಲಿ 40 ಸಾವಿರ ಗಿಡಗಳನ್ನು ನೆಟ್ಟು ಬಂಜರು ಬೆಟ್ಟವನ್ನು ಕಾಡಾಗಿಸಿದ ಇಂದೋರ್ ವ್ಯಕ್ತಿ!

Update: 2025-01-26 19:12 IST
8 ವರ್ಷಗಳಲ್ಲಿ 40 ಸಾವಿರ ಗಿಡಗಳನ್ನು ನೆಟ್ಟು ಬಂಜರು ಬೆಟ್ಟವನ್ನು ಕಾಡಾಗಿಸಿದ ಇಂದೋರ್ ವ್ಯಕ್ತಿ!

PC | ndtv.com

  • whatsapp icon

ಇಂದೋರ್ (ಮಧ್ಯಮಪ್ರದೇಶ): ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕ ರಸ್ತೆಗುಂಟ ಗಿಡಗಳನ್ನು ನೆಟ್ಟು, ಅವನ್ನೇ ತನ್ನ ಮಕ್ಕಳಂತೆ ಪೋಷಿಸಿದ್ದರಿಂದ, ಸಾಮಾನ್ಯ ತಿಮ್ಮಕ್ಕನಾಗಿದ್ದ ಅವರು ಸಾಲುಮರದ ತಿಮ್ಮಕ್ಕನಾಗಿ ಖ್ಯಾತಿ ಪಡೆದರು. ಅದೇ ರೀತಿ ಇಂದೋರ್ ನ ವ್ಯಕ್ತಿಯೊಬ್ಬರು ಬಂಜರು ಬೆಟ್ಟವನ್ನು ಕಾಡಾಗಿಸುವ ಮೂಲಕ ಮನುಷ್ಯನ ಇಚ್ಛಾಶಕ್ತಿಯ ಮುಂದೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.

ಆ ಕಾಡಿನಲ್ಲಿ ಕಾಶ್ಮೀರದ ಕೇಸರಿ ಮರ, ವಿಲೋಮರ, ನೇಪಾಳದ ರುದ್ರಾಕ್ಷಿ ಮರ, ಥಾಯ್ಲೆಂಡ್ ನ ಡ್ರಾಗನ್ ಫ್ರೂಟ್, ಆಸ್ಟ್ರೇಲಿಯದ ಬಟರ್ ಫ್ರೂಟ್, ಇಟಲಿಯ ಆಲಿವ್ ಹಾಗೂ ಮೆಕ್ಸಿಕೊದ ಖರ್ಜೂರ ಸೇರಿದಂತೆ ಒಂದು ಕಾಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯದಿದ್ದ ಈ ಬೆಟ್ಟದ ಕಾಡಿನಲ್ಲಿ ಬೆಳೆದು ನಿಂತಿವೆ. ಬಂಜರು ಕಲ್ಲು ಬೆಟ್ಟದ ಮೇಲೆ ಬೆಳೆದು ನಿಂತಿರುವ ಕೇಶರ್ ಪರ್ವತ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ ಬೆಳೆದು ನಿಂತಿರುವ ಈ ಕಾಡು, ವೈವಿಧ್ಯಮಯ ಮರಗಳಿಗೆ ಆವಾಸ ಸ್ಥಾನವಾಗಿ ಬದಲಾಗಿದೆ. ಆ ಮೂಲಕ ಪ್ರಕೃತಿ ಪ್ರಿಯರಿಗೆ ಕನಸಿನ ನೈಸರ್ಗಿಕ ಪ್ರವಾಸಿ ತಾಣವಾಗಿ ಬದಲಾಗಿದೆ. ಇದರ ಶ್ರೇಯಸ್ಸು ವರ್ಲ್ಡ್ ರಿಸರ್ಚರ್ಸ್ ಅಸೋಸಿಯೇಶನ್ ಸಂಸ್ಥಾಪಕ ಡಾ. ಶಂಕರ್ ಲಾಲ್ ಗರ್ಗ್ ಅವರಿಗೆ ಸಲ್ಲುತ್ತದೆ.

2015ರಲ್ಲಿ ನಿವೃತ್ತ ಪ್ರಾಂಶುಪಾಲ ಹಾಗೂ ಅವರ ಕುಟುಂಬವು ಬಂಜರು ಬೆಟ್ಟವೊಂದನ್ನು ಕಾಡನ್ನಾಗಿ ಪರಿವರ್ತಿಸಲು ನಿರ್ಧರಿಸಿತು. ಅವರು ಶಾಲೆ-ಕಾಲೇಜನ್ನು ಪ್ರಾರಂಭಿಸಲು ಇಂದೋರ್ ನ ಮಹೋವ್ ಪಟ್ಟಣದಲ್ಲಿ ಜಾಗವೊಂದನ್ನು ಖರೀದಿಸಿದರಾದರೂ, ಅದು ಅವರಿಗೆ ಆಗಿ ಬರಲಿಲ್ಲ. ಹೀಗಾಗಿ ಪರಿಸರ ಪ್ರಿಯರಾಗಿದ್ದ ಅವರು ಕಾಡು ನಿರ್ಮಿಸಲು ನಿರ್ಧರಿಸಿದರು. ನಂತರ, ಗಿಡಗಳನ್ನು ನೆಡುವ ಸುದೀರ್ಘ ಪಯಣವನ್ನು ಪ್ರಾರಂಭಿಸಿದರು. ಅವುಗಳಿಗೆ ನೀರು, ಅವುಗಳ ಲಾಲನೆ-ಪಾಲನೆ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ಮೂಲಕ ಬಂಜರು ಬೆಟ್ಟವನ್ನೂ ಹಸಿರುಚ್ಛಾದಿತ ಕಾಡನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಗ್ರಾಮಸ್ಥರಿಗೆ ತೋರಿಸಿಕೊಟ್ಟರು.

74 ವರ್ಷದ ಡಾ. ಗರ್ಗ್ ತಮ್ಮ ಈ ಪಯಣವನ್ನು ಬೇವು, ಅರಳೀಮರ ಹಾಗೂ ನಿಂಬೆ ಮರಗಳನ್ನು ನೆಡುವ ಮೂಲಕ ಪ್ರಾರಂಭಿಸಿದರು. ನಂತರ, ಎಂಟು ವರ್ಷಗಳ ಅವಧಿಯಲ್ಲಿ ವೈವಿಧ್ಯಮಯ ಗಿಡಗಳನ್ನು ನೆಟ್ಟರು. (ಜುಲೈ 2016ರಿಂದ ಆಗಸ್ಟ್ 2024ರವರೆಗೆ). ಡಾ. ಗರ್ಗ್ ಸುಮಾರು 500ಕ್ಕೂ ಹೆಚ್ಚು ಪ್ರಭೇದದ 40,000 ಮರಗಳನ್ನು ಕಲ್ಲು ಮತ್ತು ಗುಡ್ಡಗಳ ಮೇಲೆ ಮೆಟ್ಟರು. ಇವುಗಳ ಪೈಕಿ ಕಲ್ಪವೃಕ್ಷ, ಕೇಸರಿ, ರುದ್ರಾಕ್ಷಿ, ಸೇಬು, ಡ್ರಾಗನ್, ಆಲಿವ್, ಲೀಚಿ, ಆಫ್ರಿಕನ್ ಟುಲಿಪ್ಸ್ ಹಾಗೂ ಏಲಕ್ಕಿ ಹೂವುಗಳ ಗಿಡಗಳು ಸೇರಿದ್ದವು.

ಇದಲ್ಲದೆ ಕೇಶರ್ ಪರ್ವತದಲ್ಲಿ ತೇಗು ಮರ, ರೋಸ್ ಮರ, ಶ್ರೀಗಂಧ ಮರ, ಮಹೋಗನಿ, ಆಲದ ಮರ, ಸಾಲುಮರ, ಅಂಜನ್, ಬಿದಿರು, ವಿಲೊ ಮರ, ಡಿಯೊಡಾರ್ ಮರ, ಪೈನ್ ಮರ, ದಹಿಮಾನ್ ಮರ, ಖಮ್ಮರ್ ಮರ ಹಾಗೂ ಸಿಲ್ವರ್ ಓಕ್ ಮರಗಳನ್ನೂ ಇಲ್ಲಿ ನೆಡಲಾಗಿದೆ.

ಈ ಪೈಕಿ 15,000 ಮರಗಳು 12 ಅಡಿಗಿಂತ ಹೆಚ್ಚು ಉದ್ದ ಬೆಳೆದು ನಿಂತಿವೆ. ಕೇಶರ್ ಪರ್ವತದಲ್ಲಿನ ಗಿಡಗಳ ಜೀವಂತಿಕೆ ಪ್ರಮಾಣ ಶೇ. 95ರಷ್ಟಿದೆ.

ಈ ಗಿಡಗಳಿಗೆ ಯಾವುದೇ ಹೆಚ್ಚುವರಿ ಗೊಬ್ಬರಗಳನ್ನು ಉಣಿಸಲಾಗಿಲ್ಲ. ಮಳೆ ನೀರಿನಲ್ಲಿರುವ ಸಾರಜನಕ ಹಾಗೂ ಗಂಧಕ ಗಿಡಗಳ ಅಗತ್ಯಗಳನ್ನು ಪೂರೈಸುತ್ತವೆ ಎನ್ನುತ್ತಾರೆ ಡಾ. ಗರ್ಗ್.

ಕಾಶ್ಮೀರ ಕಣಿವೆಯ ಮೂಲದ್ದಾದ ಕೇಸರಿ ಮರದಿಂದ ಈ ಬೆಟ್ಟಕ್ಕೆ ಕೇಶರ್ ಪರ್ವತ ಎಂಬ ಹೆಸರು ಬಂದಿದೆ. 2021ರಲ್ಲಿ ಮೊದಲ ಬಾರಿಗೆ ಈ ಕಾಡಿನಲ್ಲಿ 25 ಕೇಸರಿ ಹೂವುಗಳು ಅರಳಿದ್ದವು. 2022ರಲ್ಲಿ ಈ ಸಂಖ್ಯೆ 100ಕ್ಕೆ ಏರಿಕೆಯಾಗಿ, 2023ರಲ್ಲಿ ಹಂತಹಂತವಾಗಿ ಹೆಚ್ಚಾಗಿತ್ತು.

ಈ ಬೆಟ್ಟದ ಮೇಲೆ ಇನ್ನೂ 10,000 ಗಿಡಗಳನ್ನು ನೆಡುವ ಗುರಿ ಹೊಂದಿರುವ ಡಾ. ಗರ್ಗ್, ಆ ಮೂಲಕ ‘ಪರಿಸರವನ್ನು ರಕ್ಷಿಸಿ, ಭೂಮಿಯನ್ನು ರಕ್ಷಿಸಿ’ ಎಂಬ ಗುರಿಯನ್ನು ಸಾಧಿಸಲು ಬಯಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News