ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯನ್ನು ಭೇಟಿಯಾಗಲಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

Update: 2024-07-02 05:42 GMT

PC: PTI

ಹೈದರಾಬಾದ್: ಎನ್ ಡಿಎ ಮಿತ್ರಪಕ್ಷವಾದ ತೆಲುಗುದೇಶಂ ಪಾರ್ಟಿ ಮುಖಂಡ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪಕ್ಕದ ತೆಲಂಗಾಣ‌ ರಾಜ್ಯದ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ರೇವಂತ್ ರೆಡ್ಡಿಯವರ ನಿವಾಸಕ್ಕೆ ಭೇಟಿ ನೀಡಲು ಪ್ರಸ್ತಾಪಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎರಡೂ ರಾಜ್ಯಗಳು ಯಾವ ಯೋಜನೆಗಳ ಬಗ್ಗೆ ಸಹಭಾಗಿತ್ವ ಮಾಡಿಕೊಳ್ಳಬಹುದು ಎಂಬ ವಿಷಯದ ಬಗ್ಗೆ ಚರ್ಚಿಸಲು ಈ ಮುಖಂಡರ ಸಭೆ ಕರೆಯಲಾಗಿದೆ ಎಂದು ನಾಯ್ಡು ಪತ್ರದಿಂದ ತಿಳಿಯುತ್ತದೆ. ಆದರೆ ಈ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

"ಆಂಧ್ರಪ್ರದೇಶ ವಿಭಜನೆಯಾಗಿ 10 ವರ್ಷ ಕಳೆದಿದ್ದು, ಪುನರ್ ವಿಂಗಡಣೆ ಕಾಯ್ದೆಯಿಂದ ಹಲವು ವಿಚಾರಗಳ ಸಂಬಂಧ ಹಲವು ಬಾರಿ ಚರ್ಚೆಗಳು ನಡೆದಿವೆ. ಉಭಯ ರಾಜ್ಯಗಳ ಕಲ್ಯಾಣ ಮತ್ತು ಪ್ರಗತಿ ಬಗ್ಗೆ ಇದು ಮಹತ್ವದ ಪರಿಣಾಮಗಳನ್ನು ಬೀರಲಿದೆ. ಈ ಸಮಸ್ಯೆಗಳನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಸ್ಥಳದಲ್ಲಿ ಜುಲೈ 6ರಂದು ಶನಿವಾರ ನಿಮ್ಮನ್ನು ಭೇಟಿ ಮಾಡಲು ಉದ್ದೇಶಿಸಿದ್ದೇನೆ" ಎಂದು ನಾಯ್ಡು ತೆಲಂಗಾಣ ಸಿಎಂಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

"ಈ ಪ್ರಮುಖ ವಿಚಾರಗಳ ಬಗ್ಗೆ ಸಮಗ್ರವಾಗಿ ತೊಡಗಿಸಿಕೊಳ್ಳಲು ಮತ್ತು ಉಭಯ ರಾಜ್ಯಗಳ ಪರಸ್ಪರ ಲಾಭಕ್ಕಾಗಿ ಪರಿಣಾಮಕಾರಿ ಸಹಭಾಗಿತ್ವಕ್ಕೆ ಈ ಮುಖಾಮುಖಿ ಭೇಟಿ ಅವಕಾಶ ಒದಗಿಸುತ್ತದೆ ಎಂಬ ದೃಢ ನಂಬಿಕೆ ನನ್ನದು. ನಮ್ಮ ಚರ್ಚೆಗಳು ಫಲಕಾರಿಯಾಗಲಿವೆ ಎಂಬ ವಿಶ್ವಾಸವಿದೆ" ಎಂದು ನಾಯ್ಡು ಹೇಳಿದ್ದಾರೆ.

ತೆಲಂಗಾಣ ರಾಜ್ಯವನ್ನು ಆಂಧ್ರಪ್ರದೇಶದಿಂದ ಪ್ರತ್ಯೇಕಿಸಿದ ಬಳಿಕ ವಿಲಕ್ಷಣ ಸ್ಥಿತಿ ಎದುರಾಗಿದ್ದು, 10 ವರ್ಷಗಳ ಕಾಲ ಉಭಯ ರಾಜ್ಯಗಳು ಹೈದರಾಬಾದ್ ನಗರವನ್ನು ಜಂಟಿ ರಾಜಧಾನಿಯಾಗಿ ಹೊಂದಿದ್ದವು. ಈ ಅವಧಿ ಇದೀಗ ಮುಗಿದಿದೆ. ಆಂಧ್ರಪ್ರದೇಶ ತನ್ನ ರಾಜಧಾನಿಯನ್ನು ಇನ್ನೂ ನಿರ್ಮಿಸಿಕೊಳ್ಳಬೇಕಿದೆ. ಕಳೆದ ಐದು ವರ್ಷಗಳಲ್ಲಿ ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿಯವರು ರಾಜಧಾನಿ ನಿರ್ಮಾಣ ಯೋಜನೆಗೆ ಹಣ ಪೂರೈಕೆ ಕಡಿಮೆ ಮಾಡಿದ್ದರಿಂದ ಚಂದ್ರಬಾಬು ನಾಯ್ಡು ಅವರ ಕನಸಿನ ರಾಜಧಾನಿ ಯೋಜನೆ ನೆನೆಗುದಿಗೆ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News