ANIಗೆ ಸಂಬಂಧಿಸಿದ ಪುಟವನ್ನು ತೆಗೆಯಿರಿ : ವಿಕಿಪೀಡಿಯಕ್ಕೆ ದಿಲ್ಲಿ ಹೈಕೋರ್ಟ್ ಆದೇಶ

Update: 2024-10-16 15:21 GMT

ಹೊಸದಿಲ್ಲಿ : ಏಶ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ANI) ಸುದ್ದಿ ಸಂಸ್ಥೆಯು ವಿಕಿಮೀಡಿಯ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಕಿಪೀಡಿಯ ಪುಟವನ್ನು 36 ಗಂಟೆಗಳ ಒಳಗೆ ತೆಗೆದುಹಾಕುವಂತೆ ದಿಲ್ಲಿ ಹೈಕೋರ್ಟ್ ಬುಧವಾರ ವಿಕಿಮೀಡಿಯ ಫೌಂಡೇಶನ್‌ಗೆ ಆದೇಶ ನೀಡಿದೆ.

ಈ ಪುಟವು ‘‘ಮೇಲ್ನೋಟಕ್ಕೆ ನಿಂದನೆಯಂತೆ ಕಂಡುಬರುತ್ತಿದೆ’’ ಮತ್ತು ನ್ಯಾಯಾಲಯದ ಕಲಾಪಗಳಲ್ಲಿ ವಿಕಿಪೀಡಿಯದ ಹಸ್ತಕ್ಷೇಪಕ್ಕೆ ಸಮವಾಗಿದೆ ಎಂದು ಮುಖ್ಯ ನ್ಯಾಯಾಧೀಶ ಮನಮೋಹನ್ ಮತ್ತು ನ್ಯಾಯಾಧೀಶ ತುಷಾರ್ ರಾವ್ ಗಡೇಲ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು. ‘‘ನ್ಯಾಯಾಲಯದಲ್ಲಿ ಇರುವ ವಿಷಯದ ಬಗ್ಗೆ ಮಾತನಾಡಬಾರದು ಎಂಬ ನಿಯಮವನ್ನು ಪ್ರತಿವಾದಿಯು ಇಲ್ಲಿ ಉಲ್ಲಂಘಿಸಿರುವಂತೆ ಕಂಡುಬರುತ್ತಿದೆ’’ ಎಂದು ನ್ಯಾಯಾಲಯ ಹೇಳಿತು.

ANI ಸುದ್ದಿ ಸಂಸ್ಥೆಯು ಕೇಂದ್ರ ಸರಕಾರದ ತುತ್ತೂರಿಯಾಗಿದೆ ಎಂಬ ಬರಹವನ್ನು ವಿಕಿಪೀಡಿಯ ಪುಟದಲ್ಲಿ ಪ್ರಕಟಿಸಿರುವುದಕ್ಕಾಗಿ ಸುದ್ದಿ ಸಂಸ್ಥೆಯು ವಿಕಿಪೀಡಿಯದ ಮಾತೃ ಸಂಸ್ಥೆ ವಿಕಿಮೀಡಿಯ ಫೌಂಡೇಶನ್ ವಿರುದ್ಧ ಆಗಸ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.

ANI ಸುದ್ದಿ ಸಂಸ್ಥೆಯ 2020ರ ಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸುವ ಹೊಸ ಮಾಹಿತಿಗಳು ಸುದ್ದಿ ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಪ್ರಕಟಗೊಳ್ಳಲು ಆರಂಭಿಸಿದಾಗ, ಬಳಕೆದಾರರು ಜಿದ್ದಿಗೆ ಬಿದ್ದವರಂತೆ ಮಾಹಿತಿಗಳನ್ನು ಪರ-ವಿರುದ್ಧವಾಗಿ ತಿದ್ದಲು ಆರಂಭಿಸಿದರು. ಒಂದು ಕಡೆಯಲ್ಲಿ ಅನುಭವಿಗಳು ಮಾಹಿತಿಗಳನ್ನು ತಿದ್ದಿದರೆ, ಇನ್ನೊಂದು ಕಡೆ ಆಗಷ್ಟೇ ಖಾತೆಗಳನ್ನು ತೆರೆದವರು ಮಾಹಿತಿಗಳನ್ನು ತಮಗೆ ಬೇಕಾದಂತೆ ಬದಲಾಯಿಸಿದರು. ಈ ಹೊಸ ಖಾತೆದಾರರು ANI ವಿಕಿಪೀಡಿಯ ಪುಟದ ಮಾಹಿತಿಗಳನ್ನು ಮಾತ್ರ ತಿದ್ದುತ್ತಿದ್ದರು. ಇದು ತಿಂಗಳುಗಳ ಕಾಲ ನಡೆಯಿತು.

ಪುಟವನ್ನು ತಿದ್ದಿರುವ ಚಂದಾದಾರರ ವಿವರಗಳನ್ನು ಎರಡು ವಾರಗಳಲ್ಲಿ ಬಹಿರಂಗಗೊಳಿಸುವಂತೆ ಹೈಕೋರ್ಟ್ ವಿಕಿಪೀಡಿಯಕ್ಕೆ ಆಗಸ್ಟ್ 20ರಂದು ನಿರ್ದೇಶನ ನೀಡಿತ್ತು. ಆದರೆ, ಈ ಆದೇಶವನ್ನು ವಿಕಿಪೀಡಿಯವು ಪಾಲಿಸಿಲ್ಲ ಎಂಬುದಾಗಿ ಬಳಿಕ ANI ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತು.

ಸೆಪ್ಟಂಬರ್ 5ರಂದು, ಭಾರತದಲ್ಲಿ ವಿಕಿಪೀಡಿಯದ ವಾಣಿಜ್ಯ ವ್ಯವಹಾರಗಳನ್ನು ಮುಚ್ಚುವಂತೆ ಸರಕಾರಕ್ಕೆ ನಿರ್ದೇಶನ ನೀಡುವುದಾಗಿ ನ್ಯಾಯಾಧೀಶ ನವೀನ್ ಚಾವ್ಲಾ ಅವರ ನ್ಯಾಯಪೀಠವು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News