ನಿಧಿ ವಿಮುಖಗೊಳಿಸಿದ ಆರೋಪ: ಅನಿಲ್ ಅಂಬಾನಿ, ಇತರರಿಗೆ 624 ಕೋಟಿ ದಂಡ
ಮುಂಬೈ: ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಅವರ ಮಾಲೀಕತ್ವದ 24 ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಗೆ ಷೇರು ಮಾರುಕಟ್ಟೆಯಿಂದ ನಿಷೇಧ ವಿಧಿಸಿ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಆದೇಶ ನೀಡಿದೆ. ಜತೆಗೆ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ರಿಲಯನ್ಸ್ ಹೋಮ್ ಫೈನಾನ್ಸ್ ನಿಂದ ನಿಧಿ ವಿಮುಖಗೊಳಿಸಿದ್ದಕ್ಕಾಗಿ 624 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಆರ್ ಎಚ್ ಎಫ್ ಎಲ್ ನ ಅತ್ಯುನ್ನತ ಹುದ್ದೆಯಲ್ಲಿರುವ ಅಂಬಾನಿ, ಅಮಿತ್ ಬಾಪ್ನಾ, ರವೀಂದ್ರ ಸುಧಾಲ್ಕರ್ ಮತ್ತು ಪಿಂಕೇಶ್ ಆರ್ ಶಾ ಅವರನ್ನು ಮುಂದಿನ ಐದು ವರ್ಷಗಳ ಕಾಲ ಯಾವುದೇ ಲಿಸ್ಟೆಡ್ ಸಂಸ್ಥೆಗಳ ಜತೆ ಸಹಯೋಗ ಹೊಂದುವುದನ್ನು ಸಹಾ ನಿಷೇಧಿಸಲಾಗಿದೆ.
ಈ ವಂಚನೆಯ ಯೋಜನೆಯ ಹಿಂದಿನ ರೂವಾರಿ ಎಡಿಎಜಿ ಅನಿಲ್ ಅಂಬಾನಿ ಆಗಿರುವ ಸಾಧ್ಯತೆ ಅಧಿಕ. ಇದರ ಜತೆಗೆ ಕಂಪನಿಯ ಪ್ರಮುಖ ವ್ಯವಸ್ಥಾಪನಾ ಸಿಬ್ಬಂದಿಯಾದ ಬಾಪ್ನಾ, ಸುಧಾಲ್ಕರ್ ಮತ್ತು ಶಾ ಕೂಡಾ ಈ ವಂಚನೆ ಜಾಲದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಸೆಬಿ ಹೇಳಿದೆ.
ಸೆಬಿ ನಡೆಸಿದ ತನಿಖೆಯನ್ನು ಆಧರಿಸಿ 222 ಪುಟಗಳ ವರದಿ ಸಿದ್ಧಪಡಿಸಲಾಗಿದ್ದು, ಅಂಬಾನಿ ಹಾಗೂ ಇತರ ಮೂವರು ಪ್ರಮುಖ ಅಧಿಕಾರಿಗಳು ಅನಿಲ್ ಅಂಬಾನಿ ಸಮೂಹಕ್ಕೆ ಹೇಗೆ ದೊಡ್ಡಮೊತ್ತದ ಹಣವನ್ನು ತುಂಬಿದ್ದಾರೆ ಹಾಗೂ ಅದು ವಾಪಸ್ಸು ಬಂದಿಲ್ಲ ಎನ್ನುವ ಅಂಶವನ್ನು ವಿವರಿಸಿದೆ.
2022ರ ಫೆಬ್ರುವರಿ 11ರಂದು ನೀಡಿದ ಮಧ್ಯಂತರ ನಿರ್ದೇಶನದಬಳಿಕ ಸೆಬಿ ಈ ತನಿಖೆ ನಡೆಸಿದ್ದು, ಇದೀಗ ನಿಬಂಧನಾತ್ಮಕ ಕ್ರಮವನ್ನು ಪೂರ್ಣಗೊಳಿಸಿದಂತಾಗಿದೆ. ಆರ್ ಎಚ್ಎಫ್ಎಲ್ ನ ಮಾಜಿ ಪರಿಶೋಧನಾ ಸಂಸ್ಥೆ ಪಿಡಬ್ಲ್ಯುಸಿ ಮತ್ತು ಗ್ರಾಂಟ್ ಆಫ್ ಥೋರ್ನ್ ಟನ್ ಅಭಿಪ್ರಾಯಗಳನ್ನೂ ಉಲ್ಲೇಖಿಸಿದೆ.