ಮಹಿಳಾ ಕಮಾಂಡೋ ಕುರಿತ ಕಂಗಾನಾ ಪೋಸ್ಟ್ ನ ವಾಸ್ತವ ಏನು ಗೊತ್ತೇ?
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕಡುಬಣ್ಣದ ಸೂಟ್ ನಲ್ಲಿರುವ ಮಹಿಳೆಯ ಮುಂದೆ ನಡೆದುಹೋಗುತ್ತಿರುವ ಫೋಟೊವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಬಿಜೆಪಿ ಸಂಸದೆ ಕಂಗಾನಾ ರಾಣಾವತ್ ಇದನ್ನು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದರು.
ಆದರೆ ಈ ಮಹಿಳೆ ಯಾವ ಸೇವೆಯಲ್ಲಿ ಇದ್ದಾರೆ ಎಂಬ ಬಗ್ಗೆ ಕಂಗಾನಾ ಯಾವುದೇ ಶೀರ್ಷಿಕೆ ನೀಡಿರಲಿಲ್ಲ. ಆದರೆ ಆಕೆ ಪ್ರಧಾನಿ ಹಾಗೂ ಕುಟುಂಬ ಸದಸ್ಯರಿಗೆ ನಿಕಟ ಭದ್ರತೆ ಒದಗಿಸುವ ಎಸ್ ಪಿಜಿಯಲ್ಲಿ ವಿಶೇಷ ತರಬೇತಿ ಪಡೆದ ಕಮಾಂಡೊ ಎಂದು ಹಲವರು ಊಹಿಸಿದ್ದರು. ಆದರೆ ಆಕೆ ಎಸ್ ಪಿಜಿಯಲ್ಲಿ ಸೇವೆಯಲ್ಲಿಲ್ಲ; ಆಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಿಎಸ್ಓ ಎಂದು ಭದ್ರತಾ ಮೂಲಗಳು ಹೇಳಿವೆ.
ಆಕೆ ಸಿಆರ್ ಪಿಎಫ್ನ ಸಹಾಯಕ ಕಮಾಂಡೆಂಟ್. ದೇಶದ ಸಶಸ್ತ್ರ ಪಡೆಗಳು ಕೂಡಾ ತಮ್ಮ ಉನ್ನತ ಅಧಿಕಾರಿ ವರ್ಗದಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲು ಉತ್ತೇಜಿಸುತ್ತಿವೆ. ವಾಯು ಸುರಕ್ಷತೆ, ಸಿಗ್ನಲ್ಸ್, ಆರ್ಡನೆನ್ಸ್, ಗುಪ್ತಚರ, ಎಂಜಿನಿಯರಿಂಗ್ ಮತ್ತಿತರ ಕ್ಷೇತ್ರಗಳನ್ನೂ ಮಹಿಳಾ ಕಮಾಂಡೆಂಟ್ ಗಳನ್ನು ನಿಯೋಜಿಸಿಕೊಂಡಿವೆ.