ಇನ್ನೂ 34 ಸ್ಥಿರ ಡೋಸ್ ಸಂಯೋಜಿತ ಔಷಧಿಗಳನ್ನು ನಿಷೇಧಿಸುವ ಸಾಧ್ಯತೆ

Update: 2024-08-24 13:59 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಯಾವುದೇ ಚಿಕಿತ್ಸಕ ಸಮರ್ಥನೆಯಿರದ ಮತ್ತು ಹಲವಾರು ಪ್ರಕರಣಗಳಲ್ಲಿ ಅಸುರಕ್ಷಿತವೂ ಆಗಿದ್ದ 156 ಫಿಕ್ಸೆಡ್ ಡೋಸ್ ಕಾಂಬಿನೇಷನ್(ಎಫ್‌ಡಿಸಿ) ಔಷಧಿಗಳನ್ನು ಕೇಂದ್ರಿಯ ಔಷಧಿಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ಯು ಈಗಾಗಲೇ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಅಧಿಕಾರಿಯೋರ್ವರು,ಇಂತಹ ಇನ್ನೂ 34 ಎಫ್‌ಡಿಸಿಗಳ ಮೇಲೆ ಶೀಘ್ರವೇ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಎಫ್‌ಡಿಸಿಗಳು ಒಂದೇ ರೂಪದಲ್ಲಿ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಘಟಕಗಳನ್ನು ಒಳಗೊಂಡಿದ್ದು,ಇವುಗಳನ್ನು ಸಾಮಾನ್ಯವಾಗಿ ಸ್ಥಿರ ಅನುಪಾತದಲ್ಲಿ ತಯಾರಿಸಲಾಗುತ್ತದೆ ಮತ್ತು ವಿತರಿಸಲಾಗುತ್ತದೆ.

ಈ ತಿಂಗಳ ಪೂರ್ವಾರ್ಧದಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಸರಕಾರವು ಜ್ವರ,ಅಲರ್ಜಿಗಳು,ಅಧಿಕ ರಕ್ತದೊತ್ತಡ,ಶೀತ,ಚರ್ಮದ ಕಾಯಿಲೆಗಳು ಮತ್ತು ನೋವಿನಂತಹ ಸಾಮಾನ್ಯ ಅಸ್ವಸ್ಥತೆಗಳಿಗೆ ಚಿಕಿತ್ಸೆಗಳಲ್ಲಿ ಬಳಕೆಯಾಗುತ್ತಿದ್ದ 156 ಎಫ್‌ಡಿಸಿಗಳನ್ನು ನಿಷೇಧಿಸಿತ್ತು.

ರಾಜ್ಯ ಪರವಾನಿಗೆ ಪ್ರಾಧಿಕಾರಗಳು ಸಿಡಿಎಸ್‌ಸಿಒ ಅನುಮತಿಯಿಲ್ಲದೆ ಭಾರೀ ಸಂಖ್ಯೆಯಲ್ಲಿ ಎಫ್‌ಡಿಸಿಗಳಿಗೆ ಅನುಮೋದನೆ ನೀಡಿದ್ದವು. ಇವುಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ತಜ್ಞರ ಶಿಫಾರಸುಗಳ ಮೇರೆಗೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ಸಿಡಿಎಸ್‌ಸಿಒ ಅಧಿಕಾರಿಯೋರ್ವರು ತಿಳಿಸಿದರು.

2018ರಲ್ಲಿ 344 ಎಫ್‌ಡಿಸಿಗಳನ್ನು ನಿಷೇಧಿಸಲಾಗಿದ್ದರೆ,ಈ ತಿಂಗಳು ಇನ್ನೂ 156 ಎಫ್‌ಡಿಸಿಗಳ ಮೇಲೆ ನಿಷೇಧ ಹೇರಲಾಗಿದೆ.

ಆದರೆ 34 ಎಫ್‌ಡಿಸಿಗಳ ಮೂರನೇ ಗುಂಪು ಹೆಚ್ಚಾಗಿ ವಿಟಮಿನ್ ಸಂಯೋಜನೆಗಳಾಗಿದ್ದು,ಅವು ಇನ್ನೂ ಮೌಲ್ಯಮಾಪನ ಹಂತದಲ್ಲಿವೆ ಮತ್ತು ಅವುಗಳನ್ನು ನಿಷೇಧಿಸುವ ಬಗ್ಗೆ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News