ಕೋಟದಲ್ಲಿ ಇನ್ನೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ

Update: 2023-11-28 15:49 GMT

ಕೋಟ (ರಾಜಸ್ಥಾನ): ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಗೆ ತಯಾರಿ ನಡೆಸುತ್ತಿದ್ದ 20 ವರ್ಷ ಪ್ರಾಯದ ವಿದ್ಯಾರ್ಥಿಯೊಬ್ಬರು ರಾಜಸ್ಥಾನದ ಕೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಪಶ್ಚಿಮ ಬಂಗಾಳದ ಬೀರ್‌ಭೂಮಿ ಜಿಲ್ಲೆಯ ಫೌರೀದ್ ಹುಸೈನ್ ಎಂಬುದಾಗಿ ಗುರುತಿಸಲಾಗಿದೆ. ಅವರು ಒಂದು ವರ್ಷದಿಂದ ಕೋಟದ ಕೋಚಿಂಗ್ ಕೇಂದ್ರವೊಂದರಲ್ಲಿ ನೀಟ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಆತ್ಮಹತ್ಯಾ ಪತ್ರ ಪೊಲೀಸರಿಗೆ ಸಿಕ್ಕಿಲ್ಲ.

ಹುಸೈನ್ ಕೋಟದಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ 28ನೇ ವಿದ್ಯಾರ್ಥಿ ಆಗಿದ್ದಾರೆ. ಕೋಟವು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಹಾಗೂ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನೆರವು ನೀಡುವ ಕೋಚಿಂಗ್ ಸಂಸ್ಥೆಗಳ ಕೇಂದ್ರವಾಗಿದೆ. ಅಲ್ಲಿಗೆ ಪ್ರತಿವರ್ಷ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಹೋಗುತ್ತಾರೆ.

ಕೋಟದಲ್ಲಿ ಈ ವರ್ಷ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆಗಳು 2015ರ ಬಳಿಕ ಅತಿ ಹೆಚ್ಚು ಎಂಬುದಾಗಿ ಆಗಸ್ಟ್‌ನಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿತ್ತು. ಕೋಟದಲ್ಲಿ 2015ರಲ್ಲಿ 17 ವಿದ್ಯಾರ್ಥಿಗಳು, 2016ರಲ್ಲಿ 16 ವಿದ್ಯಾರ್ಥಿಗಳು, 2018ರಲ್ಲಿ 20 ವಿದ್ಯಾರ್ಥಿಗಳು ಮತ್ತು 2019ರಲ್ಲಿ ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, 2020 ಮತ್ತು 2021ರಲ್ಲಿ ಕೋಟಾದ ಕೋಚಿಂಗ್ ಸಂಸ್ಥೆಗಳು ಮುಚ್ಚಿದ್ದವು.

ಖಾಸಗಿ ಕೋಚಿಂಗ್ ಸಂಸ್ಥೆಗಳನ್ನು ನಿಯಂತ್ರಿಸಲು ರಾಜಸ್ಥಾನ ಸರಕಾರವು ರಾಜಸ್ಥಾನ ಕೋಚಿಂಗ ಇನ್‌ಸ್ಟಿಟ್ಯೂಟ್ಸ್ (ನಿಯಂತ್ರಣ) ಮಸೂದೆ, 2023 ಮತ್ತು ರಾಜಸ್ಥಾನ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ನಿಯಂತ್ರಣ ಪ್ರಾಧಿಕಾರ ಮಸೂದೆ, 2023 ಮಸೂದೆಗಳನ್ನು ಪರಿಚಯಿಸಿದೆ. ಆದರೆ, ಈ ಮಸೂದೆಗಳು ಇನ್ನಷ್ಟೇ ಅಂಗೀಕಾರಗೊಳ್ಳಬೇಕಾಗಿವೆ.

ಪ್ರಸ್ತಾಪಿತ ಮಸೂದೆಗಳು ಖಾಸಗಿ ಕೋಚಿಂಗ್ ಸಂಸ್ಥೆಗಳು ವಿಧಿಸುವ ಶುಲ್ಕಗಳು ಮತ್ತು ಅಧ್ಯಯನ ಸಾಮಗ್ರಿಗಳಿಗೆ ವಿದ್ಯಾರ್ಥಿಗಳು ಪಾವತಿಸಬೇಕಾಗಿರುವ ಶುಲ್ಕಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕೆಂದು ಶಿಫಾರಸು ಮಾಡುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News