ಸುಪ್ರೀಂ ಕೋರ್ಟ್‌ಗೆ ಇಬ್ಬರು ನ್ಯಾಯಾಧೀಶರ ನೇಮಕ
ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಎಚ್.ಎನ್. ಕೋಟೀಶ್ವರ್ ಸಿಂಗ್ ಮತ್ತು ಮದರಾಸು ಹೈಕೋರ್ಟ್‌ನ ಉಸ್ತುವಾರಿ ಮುಖ್ಯ ನ್ಯಾಯಾಧೀಶ ಆರ್. ಮಹಾದೇವನ್‌ರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ನೇಮಿಸಿದ್ದಾರೆ.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ವಿಷಯವನ್ನು ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ, ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಸೇರಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸಂಖ್ಯೆ ಅದರ ಸಂಪೂರ್ಣ ಬಲ 34ನ್ನು ತಲುಪಲಿದೆ.
ಕೋಟೀಶ್ವರ್ ಸಿಂಗ್ ಕಳೆದ ವರ್ಷದ ಫೆಬ್ರವರಿ 15ರಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು ಈಶಾನ್ಯ ರಾಜ್ಯ ಮಣಿಪುರದಿಂದ ಬಂದಿರುವ ಮೊದಲ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದಾರೆ.
ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಸದಸ್ಯರಾಗಿರುವ ಸುಪ್ರೀಂ ಕೋರ್ಟ್ ಕೊಲೀಜಿಯಮ್ ಜುಲೈ 12ರಂದು ಕೋಟೀಶ್ವರ್ ಸಿಂಗ್‌ರ ಹೆಸರನ್ನು ಸರ್ವಾನುಮತದಿಂದ ಶಿಫಾರಸು ಮಾಡಿತ್ತು.
ಮಣಿಪುರದ ಇಂಫಾಲ್‌ನಲ್ಲಿ 1963 ಮಾರ್ಚ್ 1ರಂದು ಜನಿಸಿರುವ ನ್ಯಾ. ಸಿಂಗ್ ಗೌಹಾಟಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎನ್. ಇಬೊಟೊಂಬಿ ಸಿಂಗ್‌ರ ಪುತ್ರ. ಅವರು ಸುಪ್ರೀಂ ಕೋರ್ಟ್‌ನಲ್ಲಿ ಸ್ವಲ್ಪ ಸಮಯ ವಕೀಲ ವೃತ್ತಿ ನಡೆಸಿದ ಬಳಿಕ, ಗೌಹಾಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡಿದರು. ಅವರನ್ನು 2011ರಲ್ಲಿ ಗೌಹಾಟಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಯಿತು. ಬಳಿಕ 2012ರಲ್ಲಿ, ಅದೇ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ನೇಮಿಸಲಾಯಿತು.
ಮದರಾಸು ಹೈಕೋರ್ಟ್‌ನ ಉಸ್ತುವಾರಿ ಮುಖ್ಯ ನ್ಯಾಯಾಧೀಶ ಆರ್. ಮಹಾದೇವನ್ ಹಿಂದುಳಿದ ವರ್ಗಕ್ಕೆ ಸೇರಿದವರು. ಅವರು ಮದರಾಸು ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು, 1989ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಅವರನ್ನು 2013ರಲ್ಲಿ ಮದರಾಸು ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಯಿತು.