ಅಂತರ್ರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಪ್ರಕಟಿಸಿದ ಅರ್ಜೆಂಟೀನದ ಸ್ಟಾರ್ ಆ್ಯಂಜೆಲ್ ಡಿ ಮಾರಿಯಾ

Update: 2023-11-24 16:08 GMT

ಆ್ಯಂಜೆಲ್ ಡಿ ಮಾರಿಯಾ | Photo: NDTV 

ಬ್ಯುನಸ್ಐರಿಸ್ : ಅರ್ಜೆಂಟೀನದ ಫಾರ್ವರ್ಡ್ ಆಟಗಾರ ಆ್ಯಂಜೆಲ್ ಡಿ ಮಾರಿಯಾ ಮುಂದಿನ ವರ್ಷ ಅಮೆರಿಕದಲ್ಲಿ ನಡೆಯುವ ಕೋಪಾ ಅಮೆರಿಕ ಟೂರ್ನಿಯ ನಂತರ ಅಂತರ್ರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವ ಯೋಜನೆ ಇದೆ ಎಂದು ಗುರುವಾರ ಪ್ರಕಟಿಸಿದ್ದಾರೆ.

15 ವರ್ಷಗಳ ಕಾಲ ಅರ್ಜೆಂಟೀನ ತಂಡವನ್ನು ಪ್ರತಿನಿಧಿಸಿ ಸಾಕಷ್ಟು ಏಳುಬೀಳು ಕಂಡಿದ್ದ 35ರ ಹರೆಯದ ಡಿ ಮಾರಿಯಾ ಫಿಫಾ ವಿಶ್ವಕಪ್(2022), ಕೋಪಾ ಅಮೆರಿಕ(2021), ಅಂಡರ್-17 ಫಿಫಾ ವಿಶ್ವಕಪ್(2007), ಒಲಿಂಪಿಕ್ಸ್ ಗೋಲ್ಡ್(2008) ಸಹಿತ ಹಲವು ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಡಿ ಮಾರಿಯಾ 2008ರಲ್ಲಿ ಪರಾಗ್ವೆ ವಿರುದ್ಧ ಅರ್ಜೆಂಟೀನದ ಪರ ಚೊಚ್ಚಲ ಪಂದ್ಯ ಆಡಿದ ನಂತರ ಹಿಂತಿರುಗಿ ನೋಡಿಲ್ಲ. ವಿಶ್ವ ಚಾಂಪಿಯನ್ ಅರ್ಜೆಂಟೀನದ ಪರ 136 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಡಿ ಮಾರಿಯಾ ನಾಲ್ಕು ವಿಶ್ವಕಪ್ ಟೂರ್ನಿಗಳು, ಐದು ಕೋಪಾ ಅಮೆರಿಕ ಟೂರ್ನಿ ಹಾಗೂ ಇತರ ಸ್ಫರ್ಧಾವಳಿಗಳಲ್ಲಿ ಅರ್ಜೆಂಟೀನವನ್ನು ಪ್ರತಿನಿಧಿಸಿದ್ದರು. 2022ರ ವಿಶ್ವಕಪ್ ಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಗೋಲು ದಾಖಲಿಸಿದ್ದರು.

ವಿಶಿಷ್ಟ ಸಾಧನೆ

ಡಿ ಮಾರಿಯಾ ತನ್ನ ದೇಶದ ಪರ ಗರಿಷ್ಠ ಪಂದ್ಯಗಳನ್ನು(136) ಆಡಿದ 4ನೇ ಆಟಗಾರನಾಗಿದ್ದಾರೆ.ಅರ್ಜೆಂಟೀನದ ಪರ 29 ಗೋಲುಗಳನ್ನು ಗಳಿಸಿರುವ ಡಿ ಮಾರಿಯಾ 29 ಬಾರಿ ಗೋಲು ಗಳಿಸಲು ನೆರವಾಗಿದ್ದಾರೆ. ಒಟ್ಟಾರೆ ಅವರು ಅರ್ಜೆಂಟೀನದ 7ನೇ ಗರಿಷ್ಠ ಗೋಲ್ ಸ್ಕೋರರ್ ಆಗಿದ್ದಾರೆ. ಒಲಿಂಪಿಕ್ಸ್ ಫೈನಲ್, ಕೋಪಾ ಅಮೆರಿಕ ಫೈನಲ್ ಹಾಗೂ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಗೋಲು ಗಳಿಸಿದ ಏಕೈಕ ಆಟಗಾರನೆಂಬ ಹಿರಿಮೆಯೋಂದಿಗೆ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಕೊನೆಯ 3 ವಿಶ್ವಕಪ್ ಟೂರ್ನಿಗಳಲ್ಲಿ ಗೋಲು

ಡಿ ಮಾರಿಯಾ ಒಟ್ಟು 4 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದು, ಕಳೆದ ಮೂರು ಆವೃತ್ತಿಗಳ (2014,2018,2022) ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಈ ಮೂರು ಗೋಲುಗಳು ಟೂರ್ನಮೆಂಟ್ ನ ನಾಕೌಟ್ ಹಂತದಲ್ಲಿ ಬಂದಿವೆ. ವಿಶ್ವಕಪ್ ನ 3 ಗೋಲುಗಳ ಪೈಕಿ ಎರಡು ಗೋಲು ಫ್ರಾನ್ಸ್ ವಿರುದ್ಧ ದಾಖಲಿಸಿದ್ದರು.

ಡಿ ಮಾರಿಯಾ ಅಮೆರಿಕದಲ್ಲಿ 2024ರ ಜೂನ್ 20ರಿಂದ ಜುಲೈ 14ರ ತನಕ ನಡೆಯುವ ಕೋಪಾ ಅಮೆರಿಕ ಟೂರ್ನಿಯಲ್ಲಿ ಆರನೇ ಬಾರಿ ಸ್ಪರ್ಧಿಸಲಿದ್ದಾರೆ. ಈ ಟೂರ್ನಿಯಲ್ಲಿ ಅರ್ಜೆಂಟೀನವು ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ. 2021ರಲ್ಲಿ ಬ್ರೆಝಿಲ್ ನ ಮರಕಾನ ಸ್ಟೇಡಿಯಮ್ ನಲ್ಲಿ ನಡೆದ ಕೋಪಾ ಅಮೆರಿಕ ಫೈನಲ್ ನಲ್ಲಿ ಗೆಲುವಿನ ಗೋಲು ಗಳಿಸಿದ ಡಿ ಮಾರಿಯಾ ಬ್ರೆಝಿಲ್ ಗೆ ಆಘಾತ ನೀಡಿದ್ದರು. 2022ರ ಫಿಫಾ ವಿಶ್ವಕಪ್ ನಲ್ಲಿ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದರು.

ಕೋಪಾ ಅಮೆರಿಕ ಟೂರ್ನಿಯಲ್ಲಿ ನಾನು ಕೊನೆಯ ಬಾರಿ ಅರ್ಜೆಂಟೀನ ಶರ್ಟ್ ಅನ್ನು ಧರಿಸುತ್ತೇನೆ. ನನ್ನ ಜೀವನದ ಅತ್ಯಂತ ಸುಂದರವಾದ ಫುಟ್ಬಾಲ್ ಗೆ  ಅತ್ಯಂತ ನೋವಿನಿಂದ ವಿದಾಯ ಹೇಳುತ್ತಿರುವೆ ಎಂದು ಡಿ ಮಾರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.

ಈ ಕೊನೆಯ ಪಂದ್ಯದಲ್ಲಿ ಅಭಿಮಾನಿಗಳ ಹರ್ಷೋದ್ಗಾರವು ನನ್ನ ಆತ್ಮವನ್ನು ಎಷ್ಟು ತುಂಬಿದೆ ಎಂಬುದನ್ನು ನಾನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ತಂಡದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ನಾನು ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ ಎಂದು ಇತ್ತೀಚೆಗೆ ನಡೆದ ಬ್ರೆಝಿಲ್ ವಿರುದ್ಧದ ತನ್ನ ಕೊನೆಯ ವಿಶ್ವಕಪ್ ಅರ್ಹತಾ ಪಂದ್ಯವನ್ನು ಉಲ್ಲೇಖಿಸಿ ಡಿ ಮಾರಿಯಾ ಹೇಳಿದ್ದಾರೆ. ಈ ಪಂದ್ಯವನ್ನು ಅರ್ಜೆಂಟೀನ ಗೆದ್ದುಕೊಂಡಿತ್ತು.

ಡಿ ಮಾರಿಯಾ ಈ ವರ್ಷ ಪೋರ್ಚುಗೀಸ್ ಚಾಂಪಿಯನ್ಸ್ ಬೆನ್ಸಿಕಾಗೆ ಮರು ಸೇರ್ಪಡೆಯಾದರು. ಡಿ ಮಾರಿಯಾ 2007 ಹಾಗೂ 2010ರ ನಡುವೆ ಯುರೋಪ್ಗೆ ಆಗಮಿಸಿದ್ದಾಗ ಬೆನ್ಫಿಕಾ ಪರ ಆಡಿದ್ದರು. ಡಿ ಮಾರಿಯಾ ರಿಯಲ್ ಮ್ಯಾಡ್ರಿಡ್, ಪ್ಯಾರಿಸ್ ಸೇಂಟ್ ಜರ್ಮೈನ್, ಜುವೆಂಟಸ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News