ಪಕ್ಷಾಂತರ ಮಾಡಲು ಆಪ್ ನ 7 ಶಾಸಕರಿಗೆ ರೂ. 25 ಕೋಟಿ ಆಮಿಷ ಒಡ್ಡಿರುವ ಬಿಜೆಪಿ: ಕೇಜ್ರಿವಾಲ್ ಆರೋಪ

Update: 2024-01-27 06:30 GMT

 ಅರವಿಂದ್ ಕೇಜ್ರಿವಾಲ್ (PTI)

ಹೊಸದಿಲ್ಲಿ: ಪಕ್ಷಾಂತರ ಮಾಡಲು ಆಮ್ ಆದ್ಮಿ ಪಕ್ಷದ ಶಾಸಕರಿಗೆ ಬಿಜೆಪಿಯು ರೂ. 25 ಕೋಟಿ ಆಮಿಷವೊಡ್ಡಿದೆ ಎಂದು ಶನಿವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಿರುವ ಬಿಜೆಪಿಯು, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಹಗರಣದಲ್ಲಿ ಶೀಘ್ರವೇ ಬಂಧಿಸಲಾಗುವುದು ಎಂದು ಬೆದರಿಕೆ ಒಡ್ಡಿದೆ ಎಂದೂ ಅವರು ಆರೋಪಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಬಿಜೆಪಿ ನಾಯಕರ ಮಾತುಕತೆಯನ್ನು ರೆಕಾರ್ಡ್‌ ಮಾಡಲಾಗಿದೆ ಎಂದು ಆಪ್ ಹೇಳಿಕೊಂಡಿದೆ.

ʼಎಕ್ಸ್ʼ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಕೇಜ್ರಿವಾಲ್, “ಅವರು (ಬಿಜೆಪಿ) ಇತ್ತೀಚೆಗೆ ದಿಲ್ಲಿಯ ನಮ್ಮ ಏಳು ಶಾಸಕರನ್ನು ಸಂಪರ್ಕಿಸಿದ್ದು, ನಾವು ಕೇಜ್ರಿವಾಲ್ ಅವರನ್ನು ಇನ್ನು ಕೆಲವೇ ದಿನಗಳಲ್ಲಿ ಬಂಧಿಸಲಿದ್ದೇವೆ. ಕೆಲವು ದಿನಗಳ ನಂತರ ನಾವು ಶಾಸಕರನ್ನು ಅವರಿಂದ ಬೇರ್ಪಡಿಸುತ್ತೇವೆ. ಈ ಕುರಿತು 21 ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಇತರರೊಂದಿಗೂ ಮಾತುಕತೆ ನಡೆಸಲಾಗುತ್ತಿದೆ. ಇದಾದ ನಂತರ ನಾವು ದಿಲ್ಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವೂ ಕೂಡಾ ಬರಬಹುದು. ನಾವು ನಿಮಗೆ ರೂ. 25 ಕೋಟಿ ಮೊತ್ತ ನೀಡಲಿದ್ದು, ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಿ ಎಂದು ಆಮಿಷ ಒಡ್ಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯು 21 ಶಾಸಕರೊಂದಿಗೆ ಸಂಪರ್ಕ ಸಾಧಿಸಿದ್ದೇವೆ ಎಂದು ಹೇಳುತ್ತಿದ್ದರೂ, ಕೇವಲ 7 ಮಂದಿ ಶಾಸಕರನ್ನು ಅವರು ಈವರೆಗೆ ಸಂಪರ್ಕಿಸಿದ್ದಾರೆ ಹಾಗೂ ಆ ಎಲ್ಲ ಶಾಸಕರೂ ಬಿಜೆಪಿಯ ಆಮಂತ್ರಣವನ್ನು ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.

ಚುನಾವಣೆಯಲ್ಲಿ ಆಪ್ ಪಕ್ಷವನ್ನು ಪರಾಭವಗೊಳಿಸುವಷ್ಟು ಶಕ್ತಿ ಇಲ್ಲದೆ ಇರುವುದರಿಂದ ದಿಲ್ಲಿಯಲ್ಲಿನ ಆಪ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದೂ ಕೇಜ್ರಿವಾಲ್ ದೂರಿದ್ದಾರೆ.

ಆದರೆ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ನಾಯಕ ಕಪಿಲ್ ಮಿಶ‍್ರಾ, “ಕಳೆದ ಏಳು ಬಾರಿ ಸುಳ್ಳು ಹೇಳಿದಂತೆಯೇ ಈ ಬಾರಿಯೂ ಅರವಿಂದ್ ಕೇಜ್ರಿವಾಲ್ ಸುಳ್ಳು ಹೇಳುತ್ತಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News