ದಿಲ್ಲಿ ಹೈಕೋರ್ಟ್ ನಿರ್ಧಾರಕ್ಕೆ ಕಾಯಿರಿ: ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಸಲಹೆ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮಗೆ ಕಳೆದ ವಾರ ವಿಚಾರಣಾ ನ್ಯಾಯಾಲಯ ನೀಡಿದ ಜಾಮೀನಿಗೆ ತಡೆ ಹೇರಿದ ದಿಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಜಾಮೀನು ಅರ್ಜಿ ಕುರಿತಂತೆ ದಿಲ್ಲಿ ಹೈಕೋರ್ಟ್ ನಿರ್ಧಾರಕ್ಕೆ ಕಾಯುವಂತೆ ಕೇಜ್ರಿವಾಲ್ ಅವರಿಗೆ ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್ ವಿ ಭಟ್ಟಿ ಅವರ ಪೀಠ ಇಂದು ವಿಚಾರಣೆ ನಡೆಸಿದೆ. ಕೇಜ್ರಿವಾಲ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ವಿಕ್ರಮ್ ಚೌಧುರಿ ಹಾಜರಿದ್ದರೆ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಉಪಸ್ಥಿತರಿದ್ದರು.
ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶಕ್ಕೆ ಕಾಯದೆ ದಿಲ್ಲಿ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿರುವಾಗ, ಸುಪ್ರೀಂ ಕೋರ್ಟ್ ಯಾಕೆ ದಿಲ್ಲಿ ಹೈಕೋರ್ಟ್ ತೀರ್ಪಿಗೆ ತಡೆ ಹೇರಬಾರದು,” ಎಂದು ಸಿಂಘ್ವಿ ತಮ್ಮ ವಾದ ಮಂಡನೆ ವೇಳೆ ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮಿಶ್ರಾ, “ಹೈಕೋರ್ಟ್ ತಪ್ಪು ಮಾಡಿದೆಯೆಂದಾದರೆ, ನಾವೂ ಅದನ್ನು ಪುನರಾವರ್ತಿಸಬೇಕೇ?” ಎಂದು ಪ್ರಶ್ನಿಸಿದರು.
ಜಾಮೀನು ಆದೇಶಕ್ಕೆ ತಡೆ ಅಭೂತಪೂರ್ವ ಕ್ರಮ ಎಂದು ಹೇಳಿದ ಸಿಂಘ್ವಿ, ಜಾಮೀನು ಏಕೆ ಒದಗಿಸಬಾರದು, ಎಂದು ಕೇಳಿದರು. ತುರ್ತಾಗಿ ಏಕೆ ಆದೇಶ ಹೊರಡಿಸಬೇಕು, ಒಂದು ದಿನ ಕಾಯುವುದು ಸಮಸ್ಯೆಯಾಗುವುದೇ ಎಂದೂ ನ್ಯಾಯಪೀಠ ಹೇಳಿತು.
ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶ ಸರಿಯಾಗಿಲ್ಲ ಎಂದು ಈಡಿ ಪರ ವಕೀಲ ಹೇಳಿದರು.
“ಹೈ-ಪ್ರೊಫೈಲ್” ಅಲ್ಲದ ವಿಚಾರದ ಕುರಿತಂತೆ ಹೈಕೋರ್ಟ್ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ ಎಂದು ಹೇಳಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.