ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಪಡೆ: ಜನಪ್ರತಿನಿಧಿಗಳ ಹಗ್ಗಜಗ್ಗಾಟ
ಗುವಾಹತಿ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಅರೆಮಿಲಿಟರಿ ಪಡೆ ನಿಯೋಜನೆ ಬಗ್ಗೆ ಶಾಸಕರು ಹಾಗೂ ಸಚಿವರಲ್ಲಿ ಹಗ್ಗಜಗ್ಗಾಟ ಆರಂಭವಾಗಿದೆ. 40 ಮಂದಿ ಶಾಸಕರು ಹಾಗೂ ಸಚಿವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಅರೆಮಿಲಿಟರಿ ಪಡೆಯನ್ನು ಸಂಪೂರ್ಣವಾಗಿ ವಾಪಾಸು ಕರೆಸಿಕೊಳ್ಳುವಂತೆ ಒತ್ತಾಯಿಸಿದ್ದರೆ, ಮತ್ತೊಂದು ಗುಂಪು ಅಸ್ಸಾಂ ರೈಫಲ್ಸ್ ಪಡೆ ರಾಜ್ಯದಲ್ಲೇ ಇರಬೇಕು ಎಂದು ಬಯಸಿದೆ.
ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್ ಇರುವುದನ್ನು ವಿರೋಧಿಸಿ ಮಹಿಳಾ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಲ್ಲೂ ಅಭಿಪ್ರಾಯಬೇಧ ಕಂಡುಬಂದಿದೆ. ಬಿಜೆಪಿ ಸದಸ್ಯರೂ ಸೇರಿದಂತೆ 40 ಮಂದಿ ಶಾಸಕರು ಹಾಗೂ ಸಚಿವರು ಮೋದಿಯವರಿಗೆ ಪತ್ರ ಬರೆದು, ರಾಜ್ಯದಲ್ಲಿ ನಿಯೋಜಿಸಿರುವ ಅಸ್ಸಾಂ ರೈಫಲ್ಸ್ ನ 22 ಹಾಗೂ 37ನೇ ಬೆಟಾಲಿಯನ್ ಗಳನ್ನು ವಾಪಾಸು ಕರೆಸಿಕೊಂಡು, ರಾಜ್ಯ ಪೊಲೀಸರ ಜತೆ "ವಿಶ್ವಾಸಾರ್ಹ ಕೇಂದ್ರೀಯ ಪಡೆಗಳನ್ನು" ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಗುರುವಾರ ಏಳು ಮಂದಿ ಬಿಜೆಪಿ ಶಾಸಕರು ಸೇರಿದಂತೆ 10 ಮಂದಿ ಕುಕಿ- ಝೊ ಶಾಸಕರು ಮನವಿ ಸಲ್ಲಿಸಿ, ಅಸ್ಸಾಂ ರೈಫಲ್ಸ್ ಪಡೆಯನ್ನು ರಾಜ್ಯದಲ್ಲೇ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಮುಖ ಚೆಕ್ ಪಾಯಿಂಟ್ ಬಿಷ್ಣುಪುರ ಜಿಲ್ಲೆಯ ಮೊಯಿರಂಗ್ ಲಮ್ ಖೀನಲ್ಲಿ ಈಗಾಗಲೇ ಬದಲಿಸಿದಂತೆ ಅಸ್ಸಾಂ ರೈಫಲ್ಸ್ ಪಡೆಯನ್ನು ಕಿತ್ತುಹಾಕಿದರೆ, ನಮ್ಮ ಸುರಕ್ಷತೆ ಹಾಗೂ ಭದ್ರತೆಗೆ ಅಪಾಯವಿದೆ ಎಂದು ಈ ಶಾಸಕರು ಪ್ರತಿಪಾದಿಸಿದ್ದಾರೆ.
ಮಣಿಪುರದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಅಸ್ಸಾಂ ರೈಫಲ್ಸ್, ಇತರ ಕೇಂದ್ರೀಯ ಪಡೆಗಳ ಜತೆ ಶ್ರಮಿಸುತ್ತಿದೆ. ನಮ್ಮ ತಾಯ್ನೆಲಕ್ಕೆ ಅವರ ಕೊಡುಗೆ ಹಾಗೂ ತ್ಯಾಗಗಳನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದು ಮನವಿಪತ್ರದಲ್ಲಿ ವಿವರಿಸಲಾಗಿದೆ. ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರದಿಂದಾಗಿ ಕುಕಿ-ಐಓ ಹಮರ್ ಮತ್ತು ಮೀಟೀ ಸಮುದಾಯಗಳ ನಡುವಿನ ನಂಬಿಕೆ ಹೊರಟುಹೋಗಿದೆ. ಆಡಳಿತ ಮತ್ತು ಕಾನೂನು ಜಾರಿ ಏಜೆನ್ಸಿಗಳಲ್ಲಿ ಕೂಡಾ ಈ ವಿಭಜನೆ ಕಂಡುಬರುತ್ತಿದೆ ಎಂದು ಈ ಪತ್ರದಲ್ಲಿ ಹೇಳಲಾಗಿದೆ.