ಅಸ್ಸಾಂ | ‘ವಿದೇಶಿಯರ’ ಬಂಧನ ಕೇಂದ್ರಗಳ ದುಸ್ಥಿತಿಗೆ ಸುಪ್ರೀಂ ಗರಂ

Update: 2024-07-26 17:03 GMT

 ಸುಪ್ರೀಂಕೋರ್ಟ್ | PC : PTI 

ಹೊಸದಿಲ್ಲಿ : ಪೌರತ್ವವು ದೃಢಪಡದ ವ್ಯಕ್ತಿಗಳನ್ನು ಹಾಗೂ ಗಡಿಪಾರಿಗಾಗಿ ಕಾಯುತ್ತಿರುವ ವಿದೇಶಿಯರನ್ನು ಇರಿಸಲಾದ ಬಂಧನಕೇಂದ್ರಗಳ ಶೋಚನೀಯ ಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯಲ್ಲಿರುವ ಬಂಧನ ಕೇಂದ್ರದ ಕುರಿತು ಅಸ್ಸಾಂನ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಲ್ಲಿಸಿದ ವರದಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಒಕಾ ಹಾಗೂ ಎ.ಜಿ. ಮಾಸಿಹಾ ಅವರನ್ನೊಳಗೊಂಡ ಪೀಠವು ಪರಿಶೀಲಿಸಿತು.

ಇಲ್ಲಿ (ಬಂಧನ ಕೇಂದ್ರ) ಸಮರ್ಪಕ ಶೌಚಾಲಯಗಳಿಲ್ಲ, ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ನೀವು ಏನನ್ನು ನಿರ್ವಹಿಸುತ್ತಿದ್ದೀರಿ ?’’ ಎಂದು ನ್ಯಾಯಾಲಯ ಪ್ರಶ್ನಿಸಿತು.

ಬಂಧನ ಕೇಂದ್ರಗಳ ಪರಿಸ್ಥಿತಿ ಅತ್ಯಂತ ಕಳಪೆಯಾಗಿದೆ. ಅಲ್ಲಿ ನೀರು ಪೂರೈಕೆ ಸಮರ್ಪಕವಾಗಿಲ್ಲ, ಸೂಕ್ತವಾದ ಶೌಚ ವ್ಯವಸ್ಥೆಯಾಗಲಿ ಅಥವಾ ಶೌಚಗೃಹಗಳಾಗಲಿ ಇಲ್ಲ ವೈದ್ಯಕೀಯ ಸೌಲಭ್ಯಗಳು, ಆರೋಗ್ಯ ಪರಿಸ್ಥಿತಿಯ ಬಗೆಗೂ ವರದಿ ಮೌನವಹಿಸಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ವರದಿಯಲ್ಲಿ ಉಲ್ಲೇಖಿಸಲಾದ ಕಳಪೆ ಸ್ಥಿತಿಯಲ್ಲಿರುವ ಬಂಧನ ಕೇಂದ್ರಗಳ ಪರಿಶೀಲನೆಗೆ ಆಗಾಗ್ಗೆ ಭೇಟಿ ನೀಡುವಂತೆಯೂ ಕಾನೂನು ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತು. ಅಲ್ಲದೆ ಆಹಾರ ಹಾಗೂ ಪಾಕಶಾಲೆಯ ನೈರ್ಮಲ್ಯದ ಗುಣಮಟ್ಟ ಹಾಗೂ ಗಾತ್ರದ ಬಗೆಯೂ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು. ಇದೇ ಅವಧಿಯಲ್ಲಿ ಗಡಿಪಾರಿನ ಸಮಸ್ಯೆಯ ಬಗೆಗೂ ಉತ್ತರಿಸಲು ಸೂಚಿಸಿತು.

ಅಸ್ಸಾಂನ ಮಾಟಿಯಾ ಬಂಧನ ಕೇಂದ್ರದಲ್ಲಿ ಪೌರತ್ವ ದೃಢೀಕರಣಗೊಳ್ಳದ, ಗಡಿಪಾರುಗೊಳ್ಳಲಿರುವ 3 ಸಾವಿರಕ್ಕೂ ಅಧಿಕ ಮಂದಿಯಿದ್ದು, ಅವರ ಸ್ಥಿತಿ ಶೋಚನೀಯವಾಗಿದೆಯೆಂದು ಅರ್ಜಿದಾರರು ದೂರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News