ಮಹಾದಾನಿಗಳಿರುವ ನಗರಗಳ ಪೈಕಿ ದೇಶದಲ್ಲಿ ಬೆಂಗಳೂರಿಗೆ ಮೂರನೆಯ ಸ್ಥಾನ!
ಬೆಂಗಳೂರು: ಇಡೀ ದೇಶದಲ್ಲಿ ಹೆಚ್ಚಿನ ಮಹಾದಾನಿಗಳನ್ನು ಹೊಂದಿರುವ ನಗರಗಳ ಪೈಕಿ ಬೆಂಗಳೂರು ಮೂರನೆಯ ಸ್ಥಾನದಲ್ಲಿದೆ ಎಂದು ಹುರೂನ್ ಇಂಡಿಯಾ ಸಂಸ್ಥೆಯು ಎಡೆಲ್ಗಿವ್ ಸಂಸ್ಥೆಯ ಜೊತೆಗೂಡಿ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
ಈ ವರದಿಯ ಪ್ರಕಾರ, ಬೆಂಗಳೂರು ನಗರದಲ್ಲಿ 13 ಮಂದಿ ಮಹಾದಾನಿಗಳಿದ್ದಾರೆ ಎಂಬುದು ತಿಳಿದು ಬಂದಿದೆ.
ಎಚ್ಸಿಎಲ್ ಟೆಕ್ನಾಲಜೀಸ್ ಕಂಪನಿಯ ಸಂಸ್ಥಾಪಕ ಶಿವ ನಾಡಾರ್ ಸತತ ಎರಡನೆ ವರ್ಷವೂ ದೇಶದ ಮಹಾದಾನಿಯಾಗಿ ಹೊರಹೊಮ್ಮಿದ್ದು, ಈ ವರ್ಷದ ಅವಧಿಯಲ್ಲಿ ಅವರು ಒಟ್ಟು ರೂ. 2,042 ಕೋಟಿ ದಾನ ಮಾಡಿದ್ದಾರೆ. ಈ ಅಂಕಿ-ಅಂಶಗಳ ಪ್ರಕಾರ, ಅವರು ಪ್ರತಿನಿತ್ಯ ಸರಾಸರಿ ರೂ. 5.6 ಕೋಟಿ ದಾನ ಮಾಡಿದ್ದಾರೆ.
ಈ ವರದಿಯಲ್ಲಿ ರೂ. 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ದಾನ ನೀಡಿರುವವರನ್ನು ಪರಿಗಣಿಸಲಾಗಿದ್ದು, ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಅಝೀಂ ಪ್ರೇಮ್ಜಿ ಕಳೆದ ವರ್ಷ ರೂ. 1,774 ಕೋಟಿ ದಾನ ಮಾಡುವ ಮೂಲಕ ಎರಡನೆಯ ಸ್ಥಾನ ಅಲಂಕರಿಸಿದ್ದಾರೆ.
ಇಡೀ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿಗಳಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಕ್ರಮವಾಗಿ ರೂ. 376 ಕೋಟಿ ಹಾಗೂ ರೂ. 285 ಕೋಟಿ ಮೊತ್ತವನ್ನು ದಾನ ಮಾಡುವ ಮೂಲಕ ಮೂರು ಮತ್ತು ಐದನೆಯ ಸ್ಥಾನದಲ್ಲಿದ್ದಾರೆ. ರೂ. 287 ಕೋಟಿ ಮೊತ್ತವನ್ನು ದಾನ ಮಾಡಿರುವ ಕುಮಾರ್ ಮಂಗಳಂ ಬಿರ್ಲಾ ಮತ್ತು ಕುಟುಂಬವು ನಾಲ್ಕನೆಯ ಸ್ಥಾನದಲ್ಲಿದೆ.
ರೂ. 241 ಕೋಟಿ ಮೊತ್ತವನ್ನು ದಾನ ಮಾಡಿರುವ ಅನಿಲ್ ಅಗರ್ವಾಲ್ ಮತ್ತು ಕುಟುಂಬವು ಏಳನೇ ಸ್ಥಾನದಲ್ಲಿದೆ.
ಬೆಂಗಳೂರು ಮೂಲದ ಉದ್ಯಮಿ ನಂದನ್ ನೀಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನೀಲೇಕಣಿ ಕ್ರಮವಾಗಿ ಎಂಟು ಮತ್ತು ಹತ್ತನೆಯ ಸ್ಥಾನದಲ್ಲಿದ್ದಾರೆ.
ಝರೋಧಾ ಸಂಸ್ಥೆಯ ಸಹ ಸಂಸ್ಥಾಪಕ 37 ವರ್ಷದ ನಿಖಿಲ್ ಕಾಮತ್ ಮಹಾದಾನಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅತ್ಯಂತ ಕಿರಿಯ ಮಹಾದಾನಿಯಾಗಿದ್ದು, ಅವರು ಈ ವರ್ಷ ರೂ. 110 ಕೋಟಿ ಮೊತ್ತವನ್ನು ದಾನ ಮಾಡಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದೇಶದ ಮಹಾದಾನಿಗಳು ಮಾಡಿರುವ ದಾನದ ಪ್ರಮಾಣ ಶೇ. 59ರಷ್ಟು ಏರಿಕೆಯಾಗಿದೆ. ಇದರೊಂದಿಗೆ ರೂ. 100 ಕೋಟಿಗೂ ಹೆಚ್ಚು ಮೊತ್ತದ ದಾನ ಮಾಡುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಎರಡರಿಂದ 14ಕ್ಕೆ ಏರಿಕೆಯಾಗಿದೆ. ರೂ. 50 ಕೋಟಿಗಿಂತ ಹೆಚ್ಚು ದಾನ ಮಾಡುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಅದೂ ಕೂಡಾ ಎರಡರಿಂದ 24ಕ್ಕೆ ಏರಿಕೆಯಾಗಿದೆ ಎಂದು ಹುರೂನ್ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ, ವ್ಯವಸ್ಥಾಪಕ ನಿರ್ದೇಶಕ ಅನಸ್ ರಹಮಾನ್ ಜುನೈದ್ ಮಾಹಿತಿ ನೀಡಿದ್ದಾರೆ.
ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ಉದ್ದೇಶಕ್ಕಾಗಿ ನೀಡುವ ದಾನದ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 31ರಷ್ಟು ಹೆಚ್ಚಳವಾಗಿದ್ದು, ರೂ. 143 ಕೋಟಿಗೆ ತಲುಪಿದೆ. 2023ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ (ಎಸ್ಡಿಜಿ) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯು (ಸಿಎಸ್ಆರ್) ಪ್ರಮುಖ ಪಾತ್ರ ವಹಿಸುವ ವಿಶ್ವಾಸವಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮಹಾದಾನಿಗಳ ಪಟ್ಟಿಯ ಮೊದಲ ಹತ್ತು ಸ್ಥಾನದಲ್ಲಿರುವವರು ಕಳೆದ ವರ್ಷ ಒಟ್ಟು ರೂ. 3,034 ಕೋಟಿ ದಾನ ನೀಡಿದ್ದರೆ, ಈ ವರ್ಷ ಆ ದಾನದ ಮೊತ್ತವು ರೂ. 5,806 ಕೋಟಿಗೆ ಏರಿಕೆಯಾಗಿದೆ.
ಈ ಮಹಾದಾನಿಗಳ ಪಟ್ಟಿಯ ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿಯಾದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿಯವರಾಗಲಿ ಅಥವಾ ಅವರ ಪತ್ನಿ ಹಾಗೂ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿಯವರಾಗಲಿ ಇರದಿರುವುದು ವಿಶೇಷ.