‘ಪಕ್ಷಪಾತಿ’ ತನಿಖಾ ಸಮಿತಿಯಿಂದ ಬ್ರಿಜ್ ಭೂಷಣ್ ರಕ್ಷಣೆಗೆ ಯತ್ನ: ಕುಸ್ತಿಪಟುಗಳ ಆರೋಪ

Update: 2023-07-18 13:42 GMT

ಬ್ರಿಜ್ ಭೂಷಣ್ | Photo: PTI

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಿದ ತನಿಖಾ ಸಮಿತಿಯ ಮೇಲ್ವಿಚಾರಣಾ ಉದ್ದೇಶವನ್ನು ಪ್ರಶ್ನಿಸಿರುವ ಕುಸ್ತಿಪಟುಗಳು, ಆ ಸಮಿತಿಯು ಅವರ ಪರ ಪಕ್ಷಪಾತಿಯಾಗಿತ್ತು ಎಂದು ದೂರಿದ್ದಾರೆ ಎಂದು ಈ ಭಾರಿ ವಿವಾದಾತ್ಮಕ ಪ್ರಕರಣದ ಕುರಿತು ದಿಲ್ಲಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ ಎಂದು ndtv.com ವರದಿ ಮಾಡಿದೆ.

ಖ್ಯಾತ ಬಾಕ್ಸರ್ ಎಂ.ಸಿ.ಮೇರಿ ಕೋಮ್ ನೇತೃತ್ವದಲ್ಲಿ ಸರ್ಕಾರವು ರಚಿಸಿದ್ದ ಆರು ಮಂದಿ ಸದಸ್ಯರ ತನಿಖಾ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆಯಾದರೂ, ಆ ವರದಿಯನ್ನು ಈವರೆಗೆ ಸಾರ್ವಜನಿಕಗೊಳಿಸಿಲ್ಲ.

ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರವಾಗಿ ತನಿಖಾ ಸಮಿತಿಯು ಪಕ್ಷಪಾತಿಯಾಗಿತ್ತು ಎಂದು ತಮ್ಮ ಪ್ರತ್ಯೇಕ ಹೇಳಿಕೆಗಳಲ್ಲಿ ದೂರುದಾರರು ಆರೋಪಿಸಿದ್ದಾರೆ.

1599 ಪುಟಗಳ ದೋಷಾರೋಪ ಪಟ್ಟಿಯು 44 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿದ್ದು, ಇದಲ್ಲದೆ ಅಪರಾಧ ಸಂಹಿತೆಯ ಸೆಕ್ಷನ್ 164ರ ಅಡಿ ದೂರುದಾರರ ಆರು ಹೇಳಿಕೆಗಳನ್ನೂ ದಾಖಲಿಸಿಕೊಂಡಿದೆ.

"ನಾನು ನನ್ನ ಹೇಳಿಕೆಯನ್ನು (ಮೇಲ್ವಿಚಾರಣಾ) ಸಮಿತಿಯೆದುರು ನೀಡಿದ ನಂತರವೂ, ನಾನು ಒಕ್ಕೂಟದ ಕಚೇರಿಗೆ ಭೇಟಿ ನೀಡಿದಾಗಲೆಲ್ಲ ಆರೋಪಿಯು ನನ್ನೆಡೆಗೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಹಾಗೂ ನನಗೆ ಅಭದ್ರತೆಯನ್ನುಂಟು ಮಾಡುವಂತಹ ಕೆಟ್ಟ ಸಂಜ್ಞೆಗಳನ್ನು ಮಾಡುತ್ತಿದ್ದ" ಎಂದು ಓರ್ವ ದೂರುದಾರರು ಹೇಳಿಕೆ ನೀಡಿದ್ದಾರೆ.

"ನಾನು ನನ್ನ ಹೇಳಿಕೆ ನೀಡುವಾಗಲೇ ವಿಡಿಯೊ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ಹಾಗೂ ನನ್ನ ಪುನರಾವರ್ತಿತ ಮನವಿಯ ಹೊರತಾಗಿಯೂ ಸಮಿತಿಯು ನನಗೆ ವಿಡಿಯೊ ಚಿತ್ರೀಕರಣದ ಪ್ರತಿಯನ್ನು ಒದಗಿಸಲಿಲ್ಲ. ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಿಕೊಳ್ಳಲಾಗಿಲ್ಲ ಹಾಗೂ ಆರೋಪಿಯನ್ನು ರಕ್ಷಿಸಲು ನನ್ನ ಹೇಳಿಕೆಯನ್ನು ತಿರುಚಿರುವ ಸಾಧ್ಯತೆಯೂ ಇದೆ ಎಂದು ಭಯವಾಗುತ್ತಿದೆ" ಎಂದೂ ಆ ಕುಸ್ತಿಪಟು ಹೇಳಿಕೆಯಲ್ಲಿ ದೂರಿದ್ದಾರೆ.

ಮತ್ತೊಬ್ಬ ದೂರುದಾರರು, ನನ್ನನ್ನು ನನ್ನ ಒಪ್ಪಿಗೆಯಿಲ್ಲದೆ ಇಂತಹ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ಭಾರತೀಯ ಕುಸ್ತಿ ಒಕ್ಕೂಟದ ಲೈಂಗಿಕ ಕಿರುಕುಳ ಸಮಿತಿಗೆ ಸದಸ್ಯೆಯನ್ನಾಗಿಸಲಾಯಿತು. ಎಲ್ಲ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಆಂತರಿಕ ದೂರು ಸಮಿತಿಯನ್ನು ಹೊಂದಿರಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.

"ನನಗೆ ಇಂತಹ ಅನುಮೋದನೆಯ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿರಲಿಲ್ಲ ಅಥವಾ ಭಾರತೀಯ ಕುಸ್ತಿ ಒಕ್ಕೂಟದ ಲೈಂಗಿಕ ಕಿರುಕುಳ ಸಮಿತಿಯ ಭಾಗವಾಗಲು ನನ್ನ ಒಪ್ಪಿಗೆಗಾಗಿ ನಾನು ಅಂತಹ ಯಾವುದೇ ಅಧಿಕೃತ ಮಾಹಿತಿಯನ್ನು ಸ್ವೀಕರಿಸಿರಲಿಲ್ಲ" ಎಂದೂ ಅವರು ತಿಳಿಸಿದ್ದಾರೆ.

"ನನ್ನ ಧ್ವನಿ ಹಾಗೂ ಆತನ ವಿರುದ್ಧದ ಆರೋಪವನ್ನು ಅಡಗಿಸುವ ಪಿತೂರಿಯಿಂದ ಮುಖ್ಯ ಆರೋಪಿಯು ಎರಡನೆ ಆರೋಪಿಯ ಜೊತೆಗೂಡಿ ಇಂತಹ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆತ ನನ್ನ ಒಪ್ಪಿಗೆ ಅಥವಾ ಸಮ್ಮತಿ ಪಡೆಯದೆ ನನ್ನನ್ನು ಸಮಿತಿಯ ಸದಸ್ಯೆಯನ್ನಾಗಿಸಿದ್ದು, ಇದೀಗ ಸಮಿತಿಯ ಸದಸ್ಯೆಯಾಗಿಯೂ ನಾನೂ ಕೂಡಾ ಸಂತ್ರಸ್ತೆ ಎಂದು ತಪ್ಪಾಗಿ ದೂರುತ್ತಿದ್ದೇನೆ ಎಂದು ಆತ ಆರೋಪಿಸುತ್ತಿದ್ದಾನೆ" ಎಂದು ತಮ್ಮ ದೂರಿನಲ್ಲಿ ಅವರು ತಿಳಿಸಿದ್ದಾರೆ.

ಹೇಳಿಕೆಯ ಚಿತ್ರೀಕರಣ ದಾಖಲೆಯನ್ನು ಒದಗಿಸುವಂತೆ ನಾನು ಒತ್ತಾಯಿಸಿದಾಗ, ಮೇಲ್ವಿಚಾರಣಾ ಸಮಿತಿಯು ನನಗೆ ಅದನ್ನು ಒದಗಿಸಲಿಲ್ಲವೆಂದೂ ಅದೇ ಸಂತ್ರಸ್ತೆ ದೂರಿದ್ದಾರೆ.

"ನನ್ನ ವಿಡಿಯೊ ಹೇಳಿಕೆಯು ಸಂಪೂರ್ಣವಾಗಿ ದಾಖಲಾಗಿಲ್ಲ ಅಥವಾ ಆರೋಪಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಆ ಹೇಳಿಕೆಯನ್ನು ತಿರುಚಬಹುದು ಎಂಬ ಸಂಶಯದಿಂದ ನಾನು ಆ ವಿಡಿಯೊ ಚಿತ್ರೀಕರಣದ ಪ್ರತಿಯೊಂದಕ್ಕೆ ಮನವಿ ಸಲ್ಲಿಸಿದ್ದೆ. ಆದರೆ, ಮೇಲ್ವಿಚಾರಣಾ ಸಮಿತಿಯ ಸದಸ್ಯರು ನನ್ನ ಮನವಿಯನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿದರು" ಎಂದೂ ಅವರು ಆರೋಪಿಸಿದ್ದಾರೆ.

ಆದರೆ, ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಒಕ್ಕೂಟದ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಕಾನೂನಿನ ಚೌಕಟ್ಟಿನಲ್ಲಿ ತನಿಖೆಗೆ ಸಹಕರಿಸಿದ್ದರಿಂದ ಅವರನ್ನು ಬಂಧಿಸಲಿಲ್ಲ ಎಂದು ದಿಲ್ಲಿ ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

"ಸಂಬಂಧಿತ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಿರುವ ಡಿಜಿಟಲ್/ವಿದ್ಯುನ್ಮಾನ ಸಾಧನಗಳು ಹಾಗೂ ದೃಶ್ಯಗಳ ಫಲಿತಾಂಶವನ್ನು ಇನ್ನಷ್ಟೇ ಸ್ವೀಕರಿಸಬೇಕಿದ್ದು, ಅವನ್ನು ಪೂರಕ ಪೊಲೀಸ್ ವರದಿಯೊಂದಿಗೆ ಸಲ್ಲಿಸಲಾಗುವುದು. ದಂಡನೆ ವಿಧಿಸಲು ಸೂಕ್ತವೆಂದು ಭಾವಿಸಲಾಗಿರುವ ಸಿಡಿಆರ್ ಇತ್ಯಾದಿಗಳ ವಿಶ್ಲೇಷಣೆಯನ್ನೂ ಆದಷ್ಟು ತ್ವರಿತವಾಗಿ ಸಲ್ಲಿಸಲಾಗುವುದು" ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News