ನೀವು ನನ್ನ ರಾಜನಲ್ಲ: ಬ್ರಿಟಿಷ್ ರಾಜ ಕುಟುಂಬದೊಂದಿಗೆ ಸಂಘರ್ಷಕ್ಕಿಳಿದ ಆಸ್ಟ್ರೇಲಿಯ ಸಂಸದೆ
ಬ್ರಿಸ್ಬೇನ್ : ಬ್ರಿಟನ್ ರಾಜ ಮೂರನೆಯ ಚಾರ್ಲ್ಸ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದಂತೆಯೆ, ಆಸ್ಟ್ರೇಲಿಯದ ಮೂಲನಿವಾಸಿ ಸೆನೆಟರ್ ಒಬ್ಬರು “ನೀವು ನನ್ನ ರಾಜನಲ್ಲ” ಎಂದು ಕೂಗಿರುವ ಘಟನೆ ನಡೆದಿದೆ ಎಂದು CNN ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಟ್ರೇಲಿಯದ ಪ್ರಧಾನಿ ಆ್ಯಂಥೊನಿ ಅಲ್ಬನೀಸ್ ಸೇರಿದಂತೆ ದೇಶದ ನಾಯಕರನ್ನು ಭೇಟಿ ಮಾಡಲು ರಾಜ ಚಾರ್ಲ್ಸ್ ಹಾಗೂ ರಾಣಿ ಕೆಮಿಲ ಆಸ್ಟ್ರೇಲಿಯದ ರಾಜಧಾನಿ ಕ್ಯಾನ್ ಬೆರ್ರಾಗೆ ಭೇಟಿ ನೀಡಿದ್ದಾಗ ಈ ವಾಗ್ಯುದ್ಧ ನಡೆದಿದೆ.
ರಾಜ ಚಾರ್ಲ್ಸ್ ಹಾಗೂ ರಾಣಿ ಕೆಮಿಲ ಇದ್ದ ಕೋಣೆಯ ಹಿಂಭಾಗದಿಂದ, “ನಮ್ಮ ಭೂಮಿಯನ್ನು ನಮಗೆ ಮರಳಿಸಿ, ನೀವು ಏನು ದೋಚಿದಿದ್ದೀರಿ ಅದನ್ನು ನಮಗೆ ಮರಳಿಸಿ” ಎಂದು ಆಸ್ಟ್ರೇಲಿಯದ ಸ್ವತಂತ್ರ ಸೆನೆಟರ್ ಲಿಡಿಯ ಥೋರ್ಪೆ ಕೂಗಿದ್ದಾರೆ. ನಂತರ, ಭದ್ರತಾ ಸಿಬ್ಬಂದಿಗಳನ್ನು ಅವರನ್ನು ಅಲ್ಲಿಂದ ಹೊರ ಹಾಕಿದ್ದಾರೆ.
230 ವರ್ಷಗಳ ಹಿಂದೆ ಬ್ರಿಟಿಷ್ ವಸಾಹತುಗಾರರು ಆಸ್ಟ್ರೇಲಿಯಾಕ್ಕೆ ಬಂದು ನೆಲೆಸುವುದಕ್ಕೂ ಮುನ್ನ, ಹತ್ತಾರು ಸಾವಿರಾರು ವರ್ಷಗಳಿಂದ ಆಸ್ಟ್ರೇಲಿಯದಲ್ಲಿರುವ ಮೂಲ ನಿವಾಸಿಗಳನ್ನು ರಾಜ ಚಾರ್ಲ್ಸ್ ತಮ್ಮ ಭಾಷಣದಲ್ಲಿ ಶ್ಲಾಘಿಸಿದರು.
“ನನ್ನ ಜೀವನಪರ್ಯಂತ ಆಸ್ಟ್ರೇಲಿಯದ ಮೂಲ ನಿವಾಸಿಗಳು ತಮ್ಮ ಕತೆಗಳು ಮತ್ತು ಸಂಸ್ಕೃತಿಗಳನ್ನು ಉದಾರವಾಗಿ ಹಂಚಿಕೊಳ್ಳುವ ಮೂಲಕ ನಾನು ಭಾರಿ ಗೌರವಕ್ಕೊಳಗಾಗುವಂತೆ ಮಾಡಿದ್ದಾರೆ,” ಎಂದು ರಾಜ ಚಾರ್ಲ್ಸ್ ಹೇಳಿದರು.
“ಅಂತಹ ಸಾಂಪ್ರದಾಯಿಕ ವಿವೇಕದಿಂದ ನನ್ನ ಸ್ವಂತ ಅನುಭವಗಳು ಹೇಗೆ ರೂಪುಗೊಂಡವು ಮತ್ತು ಬಲಿಷ್ಠಗೊಂಡವು ಎಂಬುದನ್ನು ಮಾತ್ರ ನಾನು ಹೇಳಬಲ್ಲೆ” ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ, ರಾಜ ಮನೆತನದ ದಂಪತಿಗಳಿಗೆ ಸಂಸತ್ತಿನ ಹೊರಗೆ ಸಾಂಪ್ರದಾಯಿಕ ಮೂಲನಿವಾಸಿ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ದೇಶದ ಬಹುಸಂಖ್ಯಾತ ಮೂಲನಿವಾಸಿಗಳ ಪೈಕಿ ಹಲವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ.