6 ದಿನಗಳಲ್ಲಿ 70 ಹುಸಿ ಬಾಂಬ್ ಬೆದರಿಕೆ: ಸಿಇಒಗಳ ಸಭೆ ಕರೆದ ವಿಮಾನಯಾನ ಭದ್ರತಾ ಸಂಸ್ಥೆ
ಹೊಸದಿಲ್ಲಿ: ಭಾರತೀಯ ವಿಮಾನಗಳಿಗೆ ಕಳೆದ 6 ದಿನಗಳಲ್ಲಿ 70 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ Bureau of Civil Aviation Security (BCAS) ವಿಮಾನಯಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ಕರೆದು ಮಾತುಕತೆ ನಡೆಸಿದೆ.
ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪ್ರಯಾಣಿಕರಿಗೆ ತೊಂದರೆ ಸೃಷ್ಟಿಸುವ ಮತ್ತು ವಿಮಾನಯಾನ ಸಂಸ್ಥೆಗಳಿಗೆ ನಷ್ಟ ಉಂಟು ಮಾಡುವ ಬೆದರಿಕೆಗಳನ್ನು ನಿಭಾಯಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ವಿಧಾನ(ಎಸ್ಒಪಿ) ಅನುಸರಿಸಲು ಸಿಇಒಗಳಿಗೆ ತಿಳಿಸಿದ್ದಾರೆ.
ಶನಿವಾರ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 30ಕ್ಕೂ ಅಧಿಕ ವಿಮಾನಗಳಿಗೆ ಹುಸಿ ಬೆದರಿಕೆ ಕರೆಗಳು ಬಂದಿತ್ತು. ಕಳೆದ ವಾರ ಭಾರತೀಯ ವಿಮಾನಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಹುಸಿ ಬಾಂಬ್ ಕರೆಗಳ ಐಪಿ ಅಡ್ರೆಸ್ ಗಳು ಲಂಡನ್ ಮತ್ತು ಜರ್ಮನಿಯಲ್ಲಿರುವುದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ.