ಪಶ್ಚಿಮ ಬಂಗಾಳ | ಪೊಕ್ಸೊ ಪ್ರಕರಣದ ಆರೋಪಿಗೆ ಎರಡೇ ತಿಂಗಳಲ್ಲಿ ಮರಣ ದಂಡನೆ ಶಿಕ್ಷೆ ಪ್ರಕಟ
ಕೋಲ್ಕತ್ತಾ: 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಹತ್ಯೆಗೈದಿದ್ದ 19 ವರ್ಷದ ಆರೋಪಿಗೆ, ಘಟನೆ ನಡೆದ ಕೇವಲ ಎರಡು ತಿಂಗಳಲ್ಲೇ ಮರಣ ದಂಡನೆ ವಿಧಿಸಿರುವ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಅಕ್ಟೋಬರ್ 5ರಂದು ಮಹಿಷ್ಮರಿಯಲ್ಲಿ ನಡೆದಿದ್ದ ಘಟನೆಯ ಬೆನ್ನಿಗೇ ಬಂಧನಕ್ಕೊಳಗಾಗಿದ್ದ ಮೊಸ್ತಾಕಿನ್ ಸರ್ದಾರ್ ಎಂಬ ಆರೋಪಿಯ ವಿರುದ್ಧ ಕೇವಲ ಒಂದು ತಿಂಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ನಂತರ, ಕೇವಲ 31 ದಿನಗಳಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದ ನ್ಯಾಯಾಲಯವು, ಘಟನೆ ನಡೆದ ಕೇವಲ ಎರಡೇ ತಿಂಗಳಲ್ಲಿ ತನ್ನ ತೀರ್ಪು ಪ್ರಕಟಿಸಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103, 65 ಹಾಗೂ 66ರ ಅಡಿ ಆರೋಪಿಯು ದೋಷಿ ಎಂದು ಶುಕ್ರವಾರ ನ್ಯಾಯಾಲಯ ತೀರ್ಮಾನಿಸಿತು. ಕಲ್ಕತ್ತಾ ಹೈಕೋರ್ಟ್ ಪರಿಶೀಲನೆಯ ನಂತರ, ಆರೋಪಿಯ ವಿರುದ್ಧ ಕಠಿಣ ಪೋಕ್ಸೊ ಕಾಯ್ದೆಯ ಸೆಕ್ಷನ್ ಗಳನ್ನೂ ಸೇರ್ಪಡೆ ಮಾಡಲಾಗಿತ್ತು.
ನ್ಯಾಯಾಲಯದ ತ್ವರಿತ ನ್ಯಾಯದಾನವನ್ನು ಪ್ರಶಂಸಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಘಟನೆ ನಡೆದ ಕೇವಲ 62 ದಿನಗಳಲ್ಲಿ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.