ಜರ್ಮನ್ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಬರ್ನ್ಡ್ ಹೋಲ್ಜೆನ್ಬೀನ್ ನಿಧನ

Update: 2024-04-16 16:34 GMT

ಬರ್ನ್ಡ್ ಹೋಲ್ಜೆನ್ಬೀನ್

ಹೊಸದಿಲ್ಲಿ: 1974ರ ಫುಟ್ಬಾಲ್ ವಿಶ್ವಕಪ್‌ ನಲ್ಲಿ ವಿಜೇತ ಪಶ್ಚಿಮ ಜರ್ಮನಿ ತಂಡದ ಸದಸ್ಯರಾಗಿದ್ದ ಬರ್ನ್ಡ್ ಹೋಲ್ಝನ್ಬೇನ್ ಸೋಮವಾರ ನಿಧನರಾಗಿದ್ದಾರೆ ಎಂದು ಅವರು ದೀರ್ಘ ಅವಧಿಗೆ ಆಡಿರುವ ಕ್ಲಬ್ ಐನ್ಟ್ರಾಕ್ಟ್ ಫ್ರಾಂಕ್ಫರ್ಟ್ ಮಂಗಳವಾರ ಪ್ರಕಟಿಸಿದೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಅವರು ಪಶ್ಚಿಮ ಜರ್ಮನಿಯ ಪರವಾಗಿ ಸ್ಟ್ರೈಕರ್ ಮತ್ತು ವಿಂಗರ್ ಆಗಿ ಆಡಿ 40 ಪಂದ್ಯಗಳಲ್ಲಿ ಐದು ಗೋಲುಗಳನ್ನು ಬಾರಿಸಿದ್ದಾರೆ.

1974ರ ವಿಶ್ವಕಪ್‌ ನ ಫೈನಲ್ ಪಂದ್ಯ ಮ್ಯೂನಿಕ್ನಲ್ಲಿ ನಡೆದಿತ್ತು. ನೆದರ್ಲ್ಯಾಂಡ್ಸ್ ವಿರುದ್ಧದ ಆ ಪಂದ್ಯದಲ್ಲಿ ಹೋಲ್ಝನ್ಬೇನ್ ಮಹತ್ವದ ಪೆನಾಲ್ಟಿಯೊಂದನ್ನು ಗೆದ್ದರು ಮತ್ತು ಅದನ್ನು ಪೌಲ್ ಬ್ರೇಟ್ನರ್ ಗೋಲಾಗಿ ಪರಿವರ್ತಿಸಿದರು. ಆಗ ಸ್ಕೋರ್ 1-1ರಲ್ಲಿ ಸಮಬಲಗೊಂಡಿತು. ಪೆನಾಲ್ಟಿ ಸಂಪಾದಿಸುವುದಕ್ಕಾಗಿ ಹೋಲ್ಝನ್ಬೇನ್ ಡೈವ್ ಮಾಡಿದ್ದಾರೆ ಎಂಬ ಆರೋಪವನ್ನು ನೆದರ್ಲ್ಯಾಂಡ್ಸ್ ಅಭಿಮಾನಿಗಳು ಮಾಡಿದ್ದರು. ಆದರೆ ಆ ಆರೋಪವನ್ನು ಅವರು ನಿರಾಕರಿಸಿದ್ದರು ಹಾಗೂ ಅದು ‘‘ಸ್ಪಷ್ಟ ಪೆನಾಲ್ಟಿಯಾಗಿತ್ತು’’ ಎಂಬುದಾಗಿ ತನ್ನ ಬದುಕಿನುದ್ದಕ್ಕೂ ಪ್ರತಿಪಾದಿಸುತ್ತಾ ಬಂದಿದ್ದರು.

ಮೊದಲಾರ್ಧದ ಕೊನೆಯ ವೇಳೆಗೆ ಜರ್ಡ್ ಮುಲ್ಲರ್ ಬಾರಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಜರ್ಮನಿಯು ಪಂದ್ಯವನ್ನು 2-1 ಗೋಲುಗಳ ಅಂತರದಿಂದ ಗೆದ್ದಿತು. ಅದು ಜರ್ಮನಿಯ ಎರಡನೇ ವಿಶ್ವಕಪ್ ಕಪ್ ಆಗಿತ್ತು.

ಹೋಲ್ಝನ್ಬೇನ್ 1976ರ ಯುರೋಪಿಯನ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದರು. ಝೆಕೊಸ್ಲೊವಾಕಿಯ ವಿರುದ್ಧದ ಆ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಗೋಲೊಂದನ್ನು ಬಾರಿಸಿ ಅಂಕವನ್ನು 2-2ರಲ್ಲಿ ಸಮಬಲಗೊಳಿಸಿದ್ದರು. ಆದರೆ, ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಜರ್ಮನಿಯು ಆ ಪಂದ್ಯವನ್ನು ಕಳೆದುಕೊಂಡಿತು.

ಕ್ಲಬ್ ಮಟ್ಟದಲ್ಲಿ ಹೋಲ್ಝನ್ಬೇನ್ ತನ್ನ ಕ್ರೀಡಾ ಜೀವನದ ಹೆಚ್ಚಿನ ಅವಧಿಯನ್ನು ಐನ್ಟ್ರಾಕ್ಟ್ ಫ್ರಾಂಕ್ಫರ್ಟ್ನೊಂದಿಗೆ ಕಳೆದಿದ್ದಾರೆ. ಅಲ್ಲಿ ಅವರು 420 ಪಂದ್ಯಗಳಲ್ಲಿ 160 ಗೋಲುಗಳನ್ನು ಬಾರಿಸಿ ಕ್ಲಬ್ನ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಕೆದಾರ ಆಗಿದ್ದಾರೆ. ಕ್ಲಬ್ ಜೊತೆಗಿನ 14 ವರ್ಷಗಳ ಅವಧಿಯಲ್ಲಿ ಅವರು ಮೂರು ಜರ್ಮನ್ ಕಪ್ ಗಳು ಮತ್ತು ಯುಇಎಫ್ಎ ಕಪ್ ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News