“ದಿಲ್ಲಿ ವಾಯುಮಾಲಿನ್ಯದ ಬಗ್ಗೆ ಗಮನ ಹರಿಸಿ”
ಚಂಡೀಗಢ: ‘ಮುಖ್ಯಮಂತ್ರಿ ತೀರ್ಥ ಯಾತ್ರೆ’ ಯೋಜನೆಗೆ ನೆರವು ನೀಡಲು ಸಿದ್ಧ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ ಮರುದಿನವೇ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟದಿಂದ ಜನರನ್ನು ರಕ್ಷಿಸುವತ್ತ ಗಮನ ಹರಿಸಿ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹರ್ಯಾಣ ಸರ್ಕಾರವು ಸಂಪೂರ್ಣವಾಗಿ ಸಮರ್ಥವಾಗಿದ್ದು, ದಿಲ್ಲಿಯ ಆಡಳಿತ ನಡೆಸುವಲ್ಲಿ ಅರವಿಂದ್ ಕೇಜ್ರಿವಾಲ್ ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ಅವರಿಗೆ ನೆರವು ನೀಡಲು ರಾಜ್ಯವು ಸಂತಸ ಪಡುತ್ತದೆ ಎಂದು ಮನೋಹರ್ ಲಾಲ್ ವ್ಯಂಗ್ಯವಾಗಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಹರ್ಯಾಣ ಸರ್ಕಾರವು ಹಿರಿಯ ನಾಗರಿಕರಿಗಾಗಿ ‘ಮುಖ್ಯಮಂತ್ರಿ ತೀರ್ಥ ಯಾತ್ರೆ’ ಯೋಜನೆಯನ್ನು ಜಾರಿಗೆ ತಂದಿರುವ ಬೆನ್ನಿಗೇ ಆ ಕುರಿತು ರವಿವಾರ x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್, ನಮ್ಮ ಸರ್ಕಾರದಿಂದ ಪಾಠ ಕಲಿತಿರುವ ಬಿಜೆಪಿಯು ಜನರಿಗಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.
ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆಯನ್ನು ದಿಲ್ಲಿ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಮೊದಲ ಬಾರಿಗೆ ಜುಲೈ 19, 2019ರಂದು ಜಾರಿಗೆ ತಂದಿದ್ದರು. ಈ ಯೋಜನೆಯನ್ವಯ, ರಾಷ್ಟ್ರ ರಾಜಧಾನಿ ದಿಲ್ಲಿಯ ನಿವಾಸಿಗಳಾದ ಹಿರಿಯ ನಾಗರಿಕರಿಗೆ ಉಚಿತ ಯಾತ್ರೆಯ ಕೊಡುಗೆಯನ್ನು ದಿಲ್ಲಿ ಸರ್ಕಾರ ಪ್ರಕಟಿಸಿತ್ತು.
ಅರವಿಂದ್ ಕೇಜ್ರಿವಾಲ್ ಅವರ ಪೋಸ್ಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, “ನೀವು ದಿಲ್ಲಿಯ ಆಡಳಿತವನ್ನು ನಡೆಸುವಲ್ಲೇನಾದರೂ ತೊಂದರೆ ಅನುಭವಿಸುತ್ತಿದ್ದರೆ, ದಯವಿಟ್ಟು ನಮ್ಮನ್ನು ಕೇಳಿ. ನಿಮಗೆ ನೆರವು ನೀಡಲು ನಮಗೆ ಬಹಳ ಸಂತಸವಾಗುತ್ತದೆ” ಎಂದು ತಿರುಗೇಟು ನೀಡಿದ್ದಾರೆ.
ಈ ನಡುವೆ, ಸೋಮವಾರ ದಿಲ್ಲಿ-ಎನ್‍ಸಿಆರ್ ನಲ್ಲಿನ ವಾಯು ಮಾಲಿನ್ಯದ ಪ್ರಮಾಣವು ಸರ್ಕಾರ ನಿಗದಿಪಡಿಸಿರುವ ಸುರಕ್ಷತಾ ಮಟ್ಟಕ್ಕಿಂತ ಸುಮಾರು ಏಳರಿಂದ ಎಂಟು ಪಟ್ಟು ಅಧಿಕವಾಗಿತ್ತು. ಇದರೊಂದಿಗೆ ಈ ಪ್ರಾಂತ್ಯದಲ್ಲಿ ಮಲಿನ ಮಂಜು ಮುಸುಕಿದ ವಾತಾವರಣವು ಸತತ ಏಳನೆಯ ದಿನವೂ ಮುಂದುವರಿದಿತ್ತು.