ಪ್ರಧಾನಿ ಮೋದಿ-ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನಡುವೆ ದ್ವಿಪಕ್ಷೀಯ ಮಾತುಕತೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಸೋಮವಾರ ದಿಲ್ಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವ್ಯಾಪಕ ಚರ್ಚೆಗಳ ನಂತರ ಇಂಧನ ಹಾಗೂ ಕೃಷಿ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಫೆಬ್ರವರಿ 2019 ರ ನಂತರ ಭಾರತಕ್ಕೆ ಸೌದಿ ಯುವರಾಜನ ಎರಡನೇ ಸರಕಾರಿ ಭೇಟಿ ಇದಾಗಿದೆ. ಅವರು G20 ಶೃಂಗಸಭೆಗಾಗಿ ಸೆಪ್ಟೆಂಬರ್ 8 ರಂದು ದಿಲ್ಲಿಗೆ ಆಗಮಿಸಿದ್ದರು. ಆದಾಗ್ಯೂ, ಅವರು ಪ್ರಧಾನಿ ಮೋದಿಯವರೊಂದಿಗಿನ ದ್ವಿಪಕ್ಷೀಯ ಮಾತುಕತೆಗಾಗಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಿದರು.
ಸೌದಿ ಯುವರಾಜ ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು, ಅಲ್ಲಿ ಅವರಿಗೆ ಸಂಪ್ರದಾಯದಂತೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು. ರಾಷ್ಟ್ರಪತಿ ಭವನದಲ್ಲಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಮತ್ತು ಇತರ ಸಚಿವರು ಸ್ವಾಗತಿಸಿದರು.
ಜಿ 20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವನ್ನು ಸೌದಿ ಯುವರಾಜ ಅಭಿನಂದಿಸಿದ್ದಾರೆ.