ಲೋಕಸಭೆಯ ವಿಸರ್ಜನೆಯೊಂದಿಗೆ ಅಸ್ತಿತ್ವ ಕಳೆದುಕೊಂಡ ಹುಡುಗಿಯರ ವಿವಾಹ ವಯಸ್ಸು 21ಕ್ಕೆ ಏರಿಸುವ ಮಸೂದೆ
ಹೊಸದಿಲ್ಲಿ: ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಾಹವಾಗುವ ಕಾನೂನುಬದ್ಧ ವಯಸ್ಸಿನಲ್ಲಿ ಸಮಾನತೆ ತರುವ ಉದ್ದೇಶದ ಮಸೂದೆಯು 17ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಅವಧಿ ಮೀರಿದೆ.
ಬಾಲ್ಯ ವಿವಾಹ ತಡೆ (ತಿದ್ದುಪಡಿ) ಮಸೂದೆ 2021 ಅನ್ನು ಲೋಕಸಭೆಯಲ್ಲಿ ಡಿಸೆಂಬರ್ 2021ರಲ್ಲಿ ಮಂಡಿಸಲಾಗಿತ್ತು ಹಾಗೂ ನಂತರ ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಜನ ಮತ್ತು ಕ್ರೀಡಾ ಇಲಾಖೆಗೆ ಕಳುಹಿಸಲಾಗಿತ್ತು. ಈ ಸ್ಥಾಯಿ ಸಮಿತಿಯು ವರದಿ ಸಲ್ಲಿಕೆಗೆ ಹಲವಾರು ವಿಸ್ತರಣೆಗಳನ್ನು ಪಡೆದಿತ್ತು.
ಇದೀಗ 17ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಈ ಮಸೂದೆ ಅವಧಿ ಮೀರಿದೆ ಎಂದು ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಮತ್ತು ಸಂವಿಧಾನ ತಜ್ಞ ಪಿ ಡಿ ಟಿ ಆಚಾರ್ಯ ಹೇಳಿದ್ದಾರೆ.
ಹುಡುಗಿಯರ ವಿವಾಹಕ್ಕೆ ಕನಿಷ್ಠ ವಯಸ್ಸು 21 ಆಗಿಸುವ ಉದ್ದೇಶವನ್ನು ಈ ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ತಿದ್ದುಪಡಿ ಮಸೂದೆ ಹೊಂದಿತ್ತು.
2006ರ ಕಾಯಿದೆಯಂತೆ ವಿವಾಹವಾಗಲು ಇರಬೇಕಾದ ಕನಿಷ್ಠ ವಯಸ್ಸಿಗಿಂತ ಮೊದಲು ವಿವಾಹವಾದವರು, ವಯಸ್ಕರಾದ ಎರಡು ವರ್ಷದೊಳಗೆ (ಅಂದರೆ 20 ವರ್ಷ ವಯಸ್ಸಾಗುವ ಮೊದಲು) ವಿವಾಹ ರದ್ದತಿಗೆ ಅರ್ಜಿ ಸಲ್ಲಿಸಬಹುದು. ಮಸೂದೆಯು ಈ ಅವಧಿಯನ್ನು ಐದು ವರ್ಷ, ಅಂದರೆ 23 ವರ್ಷ ವಯಸ್ಸಿನ ತನಕ ಹೆಚ್ಚಿಸಿದೆ.