ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಸಿಎಂ ಆಯ್ಕೆಗೆ ಬಿಜೆಪಿಯಿಂದ ವೀಕ್ಷಕರ ನೇಮಕ

Update: 2023-12-08 15:25 GMT

Photo: PTI 

ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಗಳಿಸಿದರೂ ಇದುವರೆಗೆ ಮುಖ್ಯಮಂತ್ರಿಗಳನ್ನು ಘೋಷಿಸಿಲ್ಲ. ಆದುದರಿಂದ ಈ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆಗೆ ಬಿಜೆಪಿ ಶುಕ್ರವಾರ ವೀಕ್ಷಕರನ್ನು ನೇಮಕ ಮಾಡಿದೆ.

ರಾಜಸ್ಥಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿನೋದ್ ತಾವ್ಡೆ, ಸರೋಜ್ ಪಾಂಡೆ; ಮಧ್ಯಪ್ರದೇಶದಲ್ಲಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೆ. ಲಕ್ಷ್ಮಣ್, ಲಾಕ್ರಾ; ಛತ್ತೀಸ್‌ಗಡದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಸರ್ಬಾನಂದ ಸೋನೋವಾಲ್, ದುಷ್ಯಂತ್ ಗೌತಮ್ ಅವರನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ ಎಂದು ಬಿಜೆಪಿಯ ಪತ್ರಿಕಾ ಹೇಳಿಕೆ ತಿಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ದೀರ್ಘಾವಧಿ ಸಭೆಯ ಬಳಿಕ ಗುರುವಾರ ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನಿರ್ಗಮಿಸುತ್ತಿರುವುದು ಕಂಡು ಬಂದಿದೆ. ಮೂರು ರಾಜ್ಯಗಳ ನಾಯಕರು ಕೂಡ ಕಳೆದ ಕೆಲವು ದಿನಗಳಿಂದ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಆದರೆ, ಮೂಲಗಳು ಇದನ್ನು ನಿರಾಕರಿಸಿವೆ, ಅಲ್ಲದೆ, ಇದು ಎಂದಿನಂತೆ ನಡೆಯುವ ಸಭೆ ಎಂದು ಹೇಳಿದೆ.

ನಡ್ಡಾ ಅವರನ್ನು ಅವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಭೇಟಿಯಾಗಿರುವುದು ಕೂಡ ಕಂಡು ಬಂದಿದೆ. ಈ ಸಂದರ್ಭ ರಾಜೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಮುನ್ನ ಅವರ ಅಭಿಪ್ರಾಯವನ್ನು ಪಡೆಯಲು ನಡ್ಡಾ ಅವರು ರಾಜೆಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News