ಬಿಜೆಪಿ ದೇಶದ ಪ್ರಜಾಪ್ರಭುತ್ವದ ತಳಹದಿಗೆ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ

Update: 2024-01-07 15:03 GMT

Photo: X/@siddaramaiah

ಮಹಾರಾಷ್ಟ್ರ(ಸಂಗಮನೇರ್): ಬಿಜೆಪಿ ಪಕ್ಷ ದೇಶದಲ್ಲಿ ವಸಾಹತುಶಾಹಿ ನೀತಿ ಪಾಲಿಸುತ್ತಿದ್ದು, ಪ್ರಜಾಪ್ರಭುತ್ವದ ತಳಹದಿಗೆ ಅಪಾಯಕಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರವಿವಾರ ಮಹಾರಾಷ್ಟ್ರದ ಸಹಕಾರಿ ಮಹರ್ಷಿ ಭಾವುಸಾಹೇಬ್ ಥಾರೋಟ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ.ಅಣ್ಣಾಸಾಹೇಬ್ ಶಿಂಧೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾತಂತ್ರ ವಿರೋಧಿ ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದರೆ, ದೇಶ ಅಪಾಯಕ್ಕೆ ಸಿಲುಕಲಿದೆ. ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಅವರು ಹೇಳಿದರು.

ಸರ್ವಾಧಿಕಾರಿ ಮನೋಭಾವವಿರುವಂತಹ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಉಳಿಸಿದರೆ, ದೇಶಕ್ಕೆ ಸಂವಿಧಾನಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಭಾರತದ ಸಂವಿಧಾನದ ಆಶಯದ ರಕ್ಷಣೆಯ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಯ ಜನವಿರೋಧಿ ನೀತಿಯನ್ನು ಕರ್ನಾಟಕದ ಮನೆಮನೆಗೂ ಕಾಂಗ್ರೆಸ್ ತಲುಪಿಸಿದ್ದರಿಂದ, ಬಿಜೆಪಿಯನ್ನು ರಾಜ್ಯದ ಅಧಿಕಾರದಿಂದ ಕಿತ್ತೊಗೆಯಲು ಸಾಧ್ಯವಾಯಿತು. ಕರ್ನಾಟಕದಲ್ಲಿ 40 ಪರ್ಸೆಂಟ್ ಕಮೀಷನ್ ನ ಭ್ರಷ್ಟಾಚಾರ ನಡೆಯಲು ಬಿಜೆಪಿ ಕಾರಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಹಾಗೂ ವಚನಭ್ರಷ್ಟತೆಯಿಂದ ಬೇಸತ್ತ ಕರ್ನಾಟಕದ ಜನ ಬಿಜೆಪಿಯನ್ನು ಕಿತ್ತೊಗೆದರು ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನು ತಪ್ಪದೇ ಈಡೇರಿಸಿದೆ. ಸಂವಿಧಾನದಲ್ಲಿ ನಂಬಿಕೆ ಇರುವಂತಹ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News