ರಾಜಸ್ಥಾನ, ಮಧ್ಯಪ್ರದೇಶ ಸಿಎಂ ಆಯ್ಕೆಗೆ ಬಿಜೆಪಿಯಲ್ಲಿ ಮುಂದುವರಿದ ಕಸರತ್ತು

Update: 2023-12-11 06:46 GMT

ಸಾಂದರ್ಭಿಕ ಚಿತ್ರ (PTI)

ಭೋಪಾಲ್/ ಜೈಪುರ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡು, ರಾಜಸ್ಥಾನದಲ್ಲಿ ಅಧಿಕಾರ ಪಡೆದುಕೊಂಡ ಬಿಜೆಪಿ, ಒಂದು ವಾರ ಕಳೆದರೂ ಮುಖ್ಯಮಂತ್ರಿಯನ್ನು ಅಂತಿಮಪಡಿಸುವಲ್ಲಿ ವಿಫಲವಾಗಿದೆ. ಉಭಯ ರಾಜ್ಯಗಳ ನೂತನ ಶಾಸಕರು ಕ್ರಮವಾಗಿ ಸೋಮವಾರ ಹಾಗೂ ಮಂಗಳವಾರ ಬಿಜೆಪಿ ವೀಕ್ಷಕರ ಸಮ್ಮುಖದಲ್ಲಿ ಸಭೆ ಸೇರಿ ನೂತನ ಶಾಸಕಾಂಗ ನಾಯಕರನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ನೂತನ ಶಾಸಕಾಂಗ ಪಕ್ಷ ನಾಯಕರು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಾಗಲಿದ್ದಾರೆ.

ಮಧ್ಯಪ್ರದೇಶಕ್ಕೆ ಹರ್ಯಾಣ ಸಿಎಂ ಮನೋಹರಲಾಲ್ ಖಟ್ಟರ್, ಪಕ್ಷದ ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ವೀಕ್ಷಕರಾಗಿರುತ್ತಾರೆ. ರಾಜಸ್ಥಾನಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವೀಕ್ಷಕರಾಗಿದ್ದು, ಹೊಸ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯ ಹೊಣೆ ಹೊತ್ತಿದ್ದಾರೆ, ಬಿಜೆಪಿ ಉಪಾಧ್ಯಕ್ಷ ಸರೋಜ್ ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಹ ವೀಕ್ಷಕರಾಗಿರುತ್ತಾರೆ. ಭೋಪಾಲ್ ನಲ್ಲಿ  ಸೋಮವಾರ ಸಂಜೆ 4ಕ್ಕೆ ಸಭೆ ನಡೆಯಲಿದೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಪ್ರಮುಖ ಬುಡಕಟ್ಟು ನಾಯಕ ವಿಷ್ಣುದೇವ ಸಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ಮಧ್ಯಪ್ರದೇಶದಲ್ಲಿ ಕೂಡಾ ಅಚ್ಚರಿಯ ನಾಯಕ ಹೊರಹೊಮ್ಮಲಿದ್ದಾರೆ ಎಂಬ ನಿರೀಕ್ಷೆ ಪಕ್ಷದ ಕಾರ್ಯಕರ್ತರಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News