ಬಿಜೆಪಿ ಸಂಸದನಿಗೆ 2 ವರ್ಷ ಜೈಲು: ಸದಸ್ಯತ್ವ ಕಳೆದುಕೊಳ್ಳುವ ಭೀತಿ

Update: 2023-08-06 02:40 GMT

ರಾಮ್‍ಶಂಕರ್ ಕಠಾರಿಯಾ. | Photo: PTI 

ಆಗ್ರಾ: ಬಿಜೆಪಿ ಸಂಸದ ಮತ್ತು ಏತ್ವಾ ಸಂಸದ ರಾಮ್‍ಶಂಕರ್ ಕಠಾರಿಯಾ ಅವರಿಗೆ 12 ವರ್ಷ ಹಳೆಯ ಪ್ರಕರಣದಲ್ಲಿ ಎಂಪಿ/ಎಂಎಲ್‍ಎ ವಿಶೇಷ ನ್ಯಾಯಾಲಯ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಭಾರತೀಯ ದಂಡಸಂಹಿತೆ ಕಾಯ್ದೆ ಸೆಕ್ಷನ್ 147 (ದಂಗೆ) ಮತ್ತು 323 (ಸ್ವಯಂಪ್ರೇರಿತವಾಗಿ ಘಾಸಿಗೊಳಿಸಿದ್ದು) ಅನ್ವಯ ಶಿಕ್ಷೆ ವಿಧಿಸಲಾಗಿದೆ. ಕೇಂದ್ರದ ಮಾಜಿ ಸಚಿವರೂ ಆಗಿರುವ ಇವರಿಗೆ ನ್ಯಾಯಾಲಯ 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.

2011ರ ನವೆಂಬರ್ 16ರಂದು ಕಠಾರಿಯಾ ಆಗ್ರಾ ಸಂಸದರಾಗಿದ್ದ ಅವಧಿಯಲ್ಲಿ 10-15 ಮಂದಿ ಬೆಂಬಲಿಗರೊಂದಿಗೆ ಆಗ್ರಾ ಪ್ರದೇಶದಲ್ಲಿ ವಿದ್ಯುತ್ ಸೇವೆ ಒದಗಿಸುತ್ತಿದ್ದ ಟೊರೆಂಟ್ ಪವರ್ ಎಂಬ ಫ್ರಾಂಚೈಸಿ ಕಂಪನಿಯ ಕಚೇರಿಗೆ ನುಗ್ಗಿ ಕಚೇರಿ ಧ್ವಂಸಗೊಳಿಸಿದ್ದರು ಎಂಧು ಆಪಾದಿಸಲಾಗಿತ್ತು ಜತೆಗೆ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ ಆರೋಪವೂ ಇತ್ತು. ಕಂಪನಿ ಪ್ರತಿನಿಧಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಪ್ರಜಾಪ್ರತಿನಿಧಿ ಕಾಯ್ದೆ-1951ರ ಅನ್ವಯ ಎರಡು ವರ್ಷ ಅಥವಾ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಯಾಗುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕಾಗುವ ಕಾರಣ, ಕಠಾರಿಯಾ ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಅವರು ಮುಂದೆ ಆರು ವರ್ಷಗಳ ಕಾಲ ಸ್ಪರ್ಧಿಸುವ ಅವಕಾಶವನ್ನೂ ಕಳೆದುಕೊಳ್ಳುತ್ತಾರೆ.

"ಆ ಸಂದರ್ಭದಲ್ಲಿ ಬಿಎಸ್ಪಿ ಸರ್ಕಾರ ಅಧಿಕಾರದಲ್ಲಿತ್ತು. ನನ್ನ ವಿರುದ್ಧ ಹಲವು ರಾಜಕೀಯ ಪ್ರೇರಿತ ದೂರುಗಳನ್ನು ದಾಖಲಿಸಲಾಗಿತ್ತು. ಇದು ಅವುಗಳ ಪೈಕಿ ಒಂದು. ನನ್ನ ವಿರುದ್ಧ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಅದನ್ನು ನಾನು ಗೌರವಿಸುತ್ತೇನೆ ಮತ್ತು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಅದನ್ನು ಚಲಾಯಿಸುವ ಹಕ್ಕು ನನಗಿದೆ" ಎಂದು ಶನಿವಾರ ಕೋರ್ಟ್ ಕಲಾಪದಲ್ಲಿ ಪಾಲ್ಗೊಂಡ ಕಠಾರಿಯಾ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News