ಸಂಸತ್ತಿನಲ್ಲಿ ದಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಬಿಧೂರಿಗೆ ಹಕ್ಕುಚ್ಯುತಿ ಸಮಿತಿಯಿಂದ ಸಮನ್ಸ್
ಹೊಸದಿಲ್ಲಿ: ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಲೋಕಸಭೆಯಲ್ಲಿ ಸೆಪ್ಟೆಂಬರ್ 21 ರಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪ ಹೊತ್ತಿರುವ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರಿಗೆ ಲೋಕಸಭೆಯ ಹಕ್ಕುಚ್ಯುತಿ ಸಮಿತಿಯು ಸಮನ್ಸ್ ಕಳುಹಿಸಿದೆ.
ಭಾರತದ ಚಂದ್ರಯಾನ-3 ಮಿಷನ್ ಯಶಸ್ಸು ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ದಕ್ಷಿಣ ದಿಲ್ಲಿ ಸದಸ್ಯರಾಗಿರುವ ಬಿಧೂರಿ ಅವರು ದಾನಿಶ್ ಅಲಿ ಅವರನ್ನುದ್ದೇಶಿಸಿ “ಈ ಮುಲ್ಲಾನನ್ನು ಹೊರಹಾಕಿ, ಈತ ಓರ್ವ ಉಗ್ರವಾದಿ” ಎಂದು ಹೇಳಿದ್ದರು.
ಅವರು ಈ ಹೇಳಿಕೆ ನೀಡುವಾಗ ಮಾಜಿ ಸಚಿವರುಗಳಾದ ರವಿಶಂಕರ್ ಪ್ರಸಾದ್ ಮತ್ತು ಹರ್ಷ್ ವರ್ಧನ್ ನಗುತ್ತಿರುವುದು ಕಾಣಿಸಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಬಿಧೂರಿ ಅವರನ್ನು ರಾಜಸ್ಥಾನದ ಟೊಂಕ್ ಜಿಲ್ಲೆಯ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿಸಲಾಗಿತ್ತು.
ಸವಲತ್ತುಗಳ ಸಮಿತಿ ಈ ಹಿಂದೆ ಅಕ್ಟೋಬರ್ 11ರಂದು ಸಮನ್ಸ್ ಜಾರಿಗೊಳಿಸಿದ್ದರೂ ರಾಜಸ್ಥಾನದಲ್ಲಿ ಪೂರ್ವನಿಗದಿತ ಕಾರ್ಯಕ್ರಮವಿದೆಯೆಂದು ಹೇಳಿ ಅವರು ಹಾಜರಾಗಿರಲಿಲ್ಲ.
ಸಮಿತಿಯು ಈಗ ಅವರಿಗೆ ಡಿಸೆಂಬರ್ 7ರಂದು ಹಾಜರಾಗುವಂತೆ ಸೂಚಿಸಿದೆ.
ಸೆಪ್ಟೆಂಬರ್ 24ರಂದ ದಾನಿಶ್ ಅಲಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಬಿಧೂರಿ ವಿರುದ್ಧ ತನಿಖೆಗೆ ಕೋರಿದ್ದರು.
ದಾನಿಶ್ ಅಲಿ ಅವರು ಪ್ರಧಾನಿ ಕುರಿತು ನೀಡಿದ ಹೇಳಿಕೆಯಿಂದಾಗಿ ಬಿಧೂರಿ ಇಂತಹ ಮಾತುಗಳನ್ನಾಡಿದ್ದರು ಎಂದು ಬಿಜೆಪಿ ಸಂಸದ ನಿಷಿಕಾಂತ್ ದುಬೆ ಸೆಪ್ಟೆಂಬರ್ 24ರಂದು ಸ್ಪೀಕರ್ಗೆ ದೂರಿದ್ದರು. ಈ ಹಿನ್ನೆಲೆಯಲ್ಲಿ ದಾನಿಶ್ ಅಲಿ ಅವರನ್ನೂ ಸಮಿತಿ ಪ್ರಶ್ನಿಸಲಿದೆ.