ಮಹಾರಾಷ್ಟ್ರದಲ್ಲಿನ ಬಿಜೆಪಿ ಆಡಳಿತ ಔರಂಗಜೇಬ್ ಗಿಂತ ಕೆಟ್ಟದಾಗಿದೆ: ಸಂಜಯ್ ರಾವತ್
Photo Credit: PTI
ಮುಂಬೈ: ಮಹಾರಾಷ್ಟ್ರದಲ್ಲಿನ ಬಿಜೆಪಿ ಆಡಳಿತ ಔರಂಗಜೇಬ್ ಆಡಳಿತಕ್ಕಿಂತ ಕೆಟ್ಟದಾಗಿದ್ದು, ಬಿಜೆಪಿಯಿಂದಾಗಿ ರೈತರು ಸಾಯುತ್ತಿದ್ದಾರೆ ಎಂದು ಶುಕ್ರವಾರ ಆರೋಪಿಸಿದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್, ರಾಜ್ಯದಲ್ಲಿ ರೈತರು, ನಿರುದ್ಯೋಗಿಗಳು ಹಾಗೂ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದೂ ದೂರಿದರು.
ಛತ್ರಪತಿ ಸಂಭಾಜಿನಗರದಲ್ಲಿರುವ ಮುಘಲ್ ದೊರೆ ಔರಂಗಜೇಬನ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ. ಆದರೆ, ಆ ಸ್ಥಳವನ್ನು ಈ ಹಿಂದಿನ ಕಾಂಗ್ರೆಸ್ ಸರಕಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಅಡಿಯಲ್ಲಿ ರಕ್ಷಿಸಿರುವುದರಿಂದ, ಅದನ್ನು ಕಾನೂನಿನ ಚೌಕಟ್ಟಿನಡಿ ಪರಿಶೀಲಿಸಬೇಕಾಗುತ್ತದೆ ಎಂದು ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೀಡಿದ್ದ ಹೇಳಿಕೆಯ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
“ಔರಂಗಜೇಬನನ್ನು ಸಮಾಧಿ ಮಾಡಿ ಇಂದಿಗೆ 400 ವರ್ಷಗಳಾಗಿವೆ. ಅವರನ್ನು ಮರೆತುಬಿಡಿ. ಮಹಾರಾಷ್ಟ್ರದ ರೈತರೇನಾದರೂ ಔರಂಗಜೇಬನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೆ? ಅವರು ನಿಮ್ಮಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದರು. ಒಂದು ವೇಳೆ ಮುಘಲ್ ದೊರೆಯು ದೌರ್ಜನ್ಯಗಳನ್ನು ನಡೆಸಿದ್ದರೆ, ಸರಕಾರವೇನು ಮಾಡುತ್ತಿದೆ ಎಂದೂ ಅವರು ಪ್ರಶ್ನಿಸಿದರು.
“ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಆಡಳಿತವು ಔರಂಗಜೇಬನ ಆಡಳಿತಕ್ಕಿಂತ ಕೆಟ್ಟದಾಗಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮುನ್ನ, ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ ಹಾಗೂ ಸಂಭಾಲ್ ನ ಬಿಜೆಪಿ ಸಂಸದ ಉದಯನ್ ರಾಜೆ ಭೋಸ್ಲೆ ಹೇಳಿಕೆ ನೀಡಿದ್ದರು.