ಸಾಕ್ಷ್ಯಾಧಾರವಿಲ್ಲದೆ ಬಿಜೆಪಿಯ ‘ಪ್ರಶ್ನೆಗಾಗಿ ಲಂಚ’ ಆರೋಪ ಠುಸ್ಸಾಗಿದೆ: ಸಂಸದೆ ಮೊಯಿತ್ರಾ
ಹೊಸದಿಲ್ಲಿ: ಬಿಜೆಪಿಯು ತನ್ನ ವಿರುದ್ಧ ಮಾಡಿರುವ ‘ಪ್ರಶ್ನೆಗಾಗಿ ಲಂಚ’ ಆರೋಪವು ಪೂರಕ ಸಾಕ್ಷ್ಯಾಧಾರಗಳಿಲ್ಲದೆ ಠುಸ್ಸಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರತಿಪಾದಿಸಿದ್ದಾರೆ. ಅದಾನಿ ಒಡೆತನದ ‘ನಕಲಿ ವಿದೇಶಿ ಬಂಡವಾಳ ಹೂಡಿಕೆ’ ಸಂಸ್ಥೆಯು ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅನುಮತಿ ಪಡೆದಿದ್ದು ಹೇಗೆ ಎಂದೂ ಅವರು ಪ್ರಶ್ನಿಸಿದ್ದಾರೆ.
ನಾನು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಸ್ವೀಕರಿಸಿದ್ದೆ ಎಂದು ಮೊದಲು ಬಿಜೆಪಿ ಆರೋಪಿಸಿತ್ತು,ಆದರೆ ಪೂರಕ ಸಾಕ್ಷ್ಯಾಧಾರಗಳಿಲ್ಲದೆ ಈ ಆರೋಪ ಠುಸ್ಸಾಗಿದೆ. ಅದೀಗ ‘ರಾಷ್ಟ್ರೀಯ ಭದ್ರತೆ’ಯ ವಿಷಯವನ್ನೆತ್ತಿದೆ ಎಂದು ಮಹುವಾ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮೊಯಿತ್ರಾ ವಿರುದ್ಧ ಮೊದಲು ‘ಪ್ರಶ್ನೆಗಳಿಗಾಗಿ ಲಂಚ’ ಆರೋಪವನ್ನು ಹೊರಿಸಿದ್ದ ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು ಶುಕ್ರವಾರ ತನ್ನ ಎಕ್ಸ್ ಪೋಸ್ಟ್‌ನಲ್ಲಿ, ‘ಸಂಸದೀಯ ಪೋರ್ಟಲ್‌ನ ಲಾಗಿನ್ ವಿವರಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದು ಎನ್‌ಐಸಿ ಜೊತೆ ಒಪ್ಪಂದವನ್ನು ಉಲ್ಲಂಘಿಸುತ್ತದೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಒಡ್ಡುತ್ತದೆ’ ಎಂದು ಹೇಳಿದ್ದರು. ಸರಕಾರಿ ಸಂಸ್ಥೆಯಾಗಿರುವ ಎನ್‌ಐಸಿ ಅಥವಾ ರಾಷ್ಟ್ರೀಯ ಮಾಹಿತಿ ಕೇಂದ್ರವು ಸಂಸದೀಯ ಪೋರ್ಟಲ್‌ನ್ನು ನಿರ್ವಹಿಸುತ್ತದೆ.
ಗೌತಮ್ ಅದಾನಿ ನೇತೃತ್ವದ ಉದ್ಯಮ ಸಮೂಹದ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿರುವ ಮೊಯಿತ್ರಾ ತನ್ನ ಇತ್ತೀಚಿನ ಎಕ್ಸ್ ಪೋಸ್ಟ್‌ನಲ್ಲಿ ‘ಅದಾನಿ ಗ್ರೂಪ್ ಶೇರುಗಳನ್ನು ಹೊಂದಿರುವ ಅಜ್ಞಾತ ವಿದೇಶಿ ಬಂಡವಾಳ ಹೂಡಿಕೆದಾರರು ಇ-ಮೇಲ್ ಐಡಿಗಿಂತ ದೊಡ್ಡ ಭದ್ರತಾ ಕಳವಳಗಳಾಗಿದ್ದಾರೆ ’ ಎಂದು ಹೇಳಿದ್ದರು.
ದುಬೆ ಅವರು ಮೊಯಿತ್ರಾರ ಮಾಜಿ ಸಂಗಾತಿ ಜೈ ಅನಂತ ದೇಹದ್ರಾಯ್ ಅವರ ಪತ್ರವೊಂದನ್ನು ಉಲ್ಲೇಖಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನು ಬರೆದ ಬಳಿಕ ಟಿಎಂಸಿಯ ಈ ಸಂಸದೆ ರಾಜಕೀಯ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಲೋಕಸಭೆಯ ನೀತಿ ಸಮಿತಿಯು ಮೊಯಿತ್ರಾ ಅದಾನಿ ಗ್ರೂಪ್‌ನ್ನು ಗುರಿಯಾಗಿಸಿಕೊಳ್ಳಲು ಉದ್ಯಮಿ ದರ್ಶನ ಹಿರಾನಂದನಿಯವರಿಂದ ಲಂಚವನ್ನು ಸ್ವೀಕರಿಸಿದ್ದರು ಎಂಬ ದೂರಿನ ತನಿಖೆಯನ್ನು ನಡೆಸುತ್ತಿದೆ.
ದುಬೆ ಮತ್ತು ದೇಹದ್ರಾಯ್ ಗುರುವಾರ ಸಮಿತಿಗೆ ‘ಮೌಖಿಕ ಸಾಕ್ಷ್ಯ’ ವನ್ನು ಸಲ್ಲಿಸಿದ್ದರು.
ತನ್ನ ವಿರುದ್ಧದ ಆರೋಪಗಳನ್ನು ಮೊಯಿತ್ರಾ ನಿರಾಕರಿಸಿದ್ದಾರಾದರೂ ತನ್ನ ಪರವಾಗಿ ಪ್ರಶ್ನೆಗಳನ್ನು ಟೈಪ್ ಮಾಡಲು ದೀರ್ಘಕಾಲದ ಸ್ನೇಹಿತ ಹಿರಾನಂದನಿಯವರೊಂದಿಗೆ ತನ್ನ ಸಂಸದೀಯ ಪೋರ್ಟಲ್ ಲಾಗಿನ್ ವಿವರಗಳನು ಹಂಚಿಕೊಂಡಿದ್ದಾಗಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದು ತನಗೆ ನೆರವಾಗುವ ಉದ್ದೇಶವನ್ನು ಮಾತ್ರ ಹೊಂದಿತ್ತು ಎಂದು ಪ್ರತಿಪಾದಿಸಿರುವ ಮೊಯಿತ್ರಾ,ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಹಣ ಪಡೆದಿರುವುದನ್ನು ನಿರಾಕರಿಸಿದ್ದಾರೆ.
ತಾನು ಅದಾನಿ ಗ್ರೂಪ್ ಮತ್ತು ಅದಕ್ಕೆ ಸರಕಾರದ ಬೆಂಬಲದ ಕಟು ಟೀಕಾಕಾರಳಾಗಿದ್ದೇನೆ, ಹೀಗಾಗಿ ಈ ‘ಆಧಾರಹಿತ’ ಆರೋಪಗಳ ಹಿಂದೆ ಅದಾನಿ ಗ್ರೂಪ್‌ನ ಕೈವಾಡವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಹಿರಾನಂದನಿ ಮತ್ತು ಮೊಯಿತ್ರಾ ಈಗಲೂ ಸಂಪರ್ಕದಲ್ಲಿದ್ದಾರೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಗಳು ನಡೆಯುತ್ತಿವೆ ಎಂದು ದುಬೆ ಶನಿವಾರ ಆರೋಪಿಸಿದ್ದಾರೆ.
ಹಿರಾನಂದನಿ ತಾನು ಸಲ್ಲಿಸಿರುವ ಅಫಿಡವಿಟ್‌ನಲ್ಲಿ,ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಳ್ಳಲು ತಾನು ಮೊಯಿತ್ರಾಗೆ ಲಂಚ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಹಿರಾನಂದನಿ ಬಲವಂತದಿಂದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಮೊಯಿತ್ರಾ ಆರೋಪಿಸಿದ್ದಾರೆ.