ವಾಟ್ಸ್‌ಆ್ಯಪ್ ಗೋಪ್ಯತೆ ನೀತಿ: ಸಿಸಿಐನಿಂದ 213.14 ಕೋಟಿ ರೂ.ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೆಟಾ ಸಜ್ಜು

Update: 2024-11-19 11:10 GMT

ಹೊಸದಿಲ್ಲಿ: ಮೆಸೇಜಿಂಗ್ ಆ್ಯಪ್‌ಗಳ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ತನಗೆ 213.14 ಕೋಟಿ ರೂ.ದಂಡವನ್ನು ವಿಧಿಸುವ ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ)ದ ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವುದಾಗಿ ವಾಟ್ಸ್‌ಆ್ಯಪ್‌ನ ಮಾತೃಸಂಸ್ಥೆ ಮೆಟಾ ಮಂಗಳವಾರ ತಿಳಿಸಿದೆ. ಸಿಸಿಐ ಆದೇಶವನ್ನು ತಾನು ಒಪ್ಪುವುದಿಲ್ಲ ಎಂದು ಅದು ಹೇಳಿದೆ.

ಸಿಸಿಐ ಸೋಮವಾರ ಹೊರಡಿಸಿರುವ ಆದೇಶವು 2021ರಲ್ಲಿ ವಾಟ್ಸ್‌ಆ್ಯಪ್‌ನ ಗೋಪ್ಯತೆ ನೀತಿಯ ಅಪ್‌ಡೇಟ್‌ಗೆ ಸಂಬಂಧಿಸಿದೆ. ಈ ಹಿಂದೆ ಫೇಸ್‌ಬುಕ್ ಎಂದು ಕರೆಯಲ್ಪಡುತ್ತಿದ್ದ ಮೆಟಾ 2014ರಲ್ಲಿ ವಾಟ್ಸ್‌ಆ್ಯಪ್‌ನ್ನು ಸ್ವಾಧೀನ ಪಡಿಸಿಕೊಂಡಿತ್ತು.

ಜನವರಿ,2021ರಲ್ಲಿ ತನ್ನ ಬಳಕೆದಾರರಿಗೆ ನೋಟಿಫಿಕೇಷನ್ ಕಳುಹಿಸಿದ್ದ ವಾಟ್ಸ್‌ಆ್ಯಪ್,ತಾನು ಹೊಸ ಗೋಪ್ಯತೆ ನೀತಿಯನ್ನು ರೂಪಿಸುತ್ತಿದ್ದೇನೆ ಮತ್ತು ಫೇಸ್‌ಬುಕ್ ಜೊತೆ ಕೆಲವು ಬಳಕೆದಾರ ದತ್ತಾಂಶಗಳನ್ನು ಹಂಚಿಕೊಳ್ಳುವ ಹಕ್ಕನ್ನು ಕಾಯ್ದಿರಿಸಿದ್ದೇನೆ ಎಂದು ತಿಳಿಸಿತ್ತು.

ತನ್ನ ನೂತನ ನೀತಿಗಳನ್ನು ಬಳಕೆದಾರರು ಒಪ್ಪಿಕೊಳ್ಳುವಂತಾಗಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತಾನು ಪ್ರಯತ್ನಿಸುತ್ತಿದ್ದೇನೆ,ಆದರೆ ಅವರು ಒಪ್ಪದಿದ್ದರೆ ಅವರ ಖಾತೆಗಳನ್ನು ನಿಧಾನವಾಗಿ ಅಳಿಸಲಾಗುವುದು ಎಂದು ಮೇ 17,2021ರಂದು ವಾಟ್ಸ್‌ಆ್ಯಪ್ ತಿಳಿಸಿತ್ತು. ಆದರೆ ಮೇ 25ರಂದು ವಾಟ್ಸ್‌ಆ್ಯಪ್, ಹೊಸ ಗೋಪ್ಯತೆ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರು ತನ್ನ ವೇದಿಕೆಯನ್ನು ಬಳಸಲು ತಾನು ನಿರ್ಬಂಧವನ್ನು ಹೇರುವುದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಿತ್ತು.

ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ವಿಧಿಸಿದ್ದ ಷರತ್ತು ಅನ್ಯಾಯದ್ದಾಗಿತ್ತು ಎಂದು ಸೋಮವಾರ ತನ್ನ ಆದೇಶದಲ್ಲಿ ಎತ್ತಿಹಿಡಿದಿರುವ ಸಿಸಿಐ, ಇದು ಯಾವುದೇ ಪರ್ಯಾಯ ಆಯ್ಕೆಯಿಲ್ಲದಿದ್ದ ಬಳಕೆದಾರರು ವಿಸ್ತರಿತ ದತ್ತಾಂಶ ಸಂಗ್ರಹವನ್ನು ಒಪ್ಪಿಕೊಳ್ಳಲು ಮತ್ತು ಮೆಟಾದೊಳಗೆ ದತ್ತಾಂಶಗಳನ್ನು ಹಂಚಿಕೊಳ್ಳಲು ಬಳಕೆದಾರರನ್ನು ಒತ್ತಾಯಿಸಿತ್ತು ಎಂದು ಹೇಳಿದೆ.

ಐದು ವರ್ಷಗಳವರೆಗೆ ಜಾಹೀರಾತು ಉದ್ದೇಶಗಳಿಗಾಗಿ ಇತರ ಮೆಟಾ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳದಂತೆ ಸಿಸಿಐ ವಾಟ್ಸ್‌ಆ್ಯಪ್‌ಗೆ ಸೂಚಿಸಿದೆ. ಜಾಹೀರಾತು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ದತ್ತಾಂಶ ಹಂಚಿಕೆಗೆ ಸಂಬಂಧಿಸಿದಂತೆ, ವಾಟ್ಸ್‌ಆ್ಯಪ್ ತನ್ನ ನೀತಿಯಲ್ಲಿ ತಾನು ಇತರ ಮೆಟಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ದತ್ತಾಂಶದ ವಿವರವನ್ನು ಉಲ್ಲೇಖಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

2021ರ ಅಪ್‌ಡೇಟ್ ಜನರ ವೈಯಕ್ತಿಕ ಸಂದೇಶಗಳ ಗೋಪ್ಯತೆಯನ್ನು ಬದಲಿಸಿರಲಿಲ್ಲ ಮತ್ತು ಆ ಸಮಯದಲ್ಲಿ ಬಳಕೆದಾರರಿಗೆ ಆಯ್ಕೆಯೊಂದನ್ನು ನೀಡಲಾಗಿತ್ತು ಎಂದು ಮಂಗಳವಾರ ಹೇಳಿರುವ ವಾಟ್ಸ್‌ಆ್ಯಪ್, ಅಪ್‌ಡೇಟ್‌ನಿಂದಾಗಿ ಯಾರೂ ತಮ್ಮ ಖಾತೆಗಳನ್ನು ಅಳಿಸುವುದಿಲ್ಲ ಅಥವಾ ವೇದಿಕೆಗೆ ಪ್ರವೇಶವನ್ನು ಕಳೆದುಕೊಳ್ಳುವುದಿಲ್ಲ ಎನ್ನುವುದನ್ನು ತಾನು ಖಚಿತಪಡಿಸಿದ್ದೇನೆ ಎಂದು ತಿಳಿಸಿದೆ.

2021ರಲ್ಲಿ ನೀತಿ ಬದಲಾವಣೆ ಕುರಿತು ವಾಟ್ಸ್‌ಆ್ಯಪ್ ನೋಟಿಫಿಕೇಷನ್‌ಗಳನ್ನು ಕಳುಹಿಸಿದಾಗ ಆ ಕ್ರಮವು ಭಾರೀ ಹಿನ್ನಡೆಯನ್ನು ಅನುಭವಿಸಿತ್ತು. ಲಕ್ಷಾಂತರ ಬಳಕೆದಾರರು ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳಿಗೆ ಸ್ಥಳಾಂತರಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News