ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಅ್ಯಂಬುಲೆನ್ಸ್ ರವಾನಿಸಿದ ಬಿಜೆಪಿ ನಾಯಕ ವಿಜಯ್ ಗೋಯಲ್; ಕಾರಣವೇನು ಗೊತ್ತೇ?
ಹೊಸದಿಲ್ಲಿ: ನಾನು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವಂತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಪಾದಿಸಿದ ಬೆನ್ನಿಗೇ ಬಿಜೆಪಿಯ ಹಿರಿಯ ನಾಯಕ ವಿಜಯ್ ಗೋಯಲ್, ಅರವಿಂದ್ ಕೇಜ್ರಿವಾಲ್‌ರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲು ಅವರ ನಿವಾಸಕ್ಕೆ ಆ್ಯಂಬುಲೆನ್ಸ್ ರವಾನಿಸಿರುವ ಘಟನೆ ವರದಿಯಾಗಿದೆ.
ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವುದರಿಂದ ನನ್ನ ಜಾಮೀನು ಅವಧಿಯನ್ನು ಇನ್ನೊಂದು ವಾರ ಕಾಲ ವಿಸ್ತರಿಸಬೇಕು ಎಂದು ಮೇ 26ರಂದು ಅರವಿಂದ್ ಕೇಜ್ರಿವಾಲ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನಾನು ಜೈಲಿನಲ್ಲಿದ್ದಾಗ ಏಳು ಕೆಜಿ ತೂಕವನ್ಮು ಕಳೆದುಕೊಂಡಿದ್ದು, ನನ್ನ ರಕ್ತದಲ್ಲಿನ ಕೀಟೋನ್ ಮಟ್ಟವು ತೀರಾ ಹೆಚ್ಚಿದೆ. ಹೀಗಾಗಿ ನಾನು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದೇನೆ ಎಂದು ಅನ್ನಿಸುತ್ತಿದೆ ಎಂದೂ ಅವರು ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದರು.
ಅರವಿಂದ್ ಕೇಜ್ರಿವಾಲ್‌ರ ಈ ಪ್ರತಿಪಾದನೆಯನ್ನು ಗೇಲಿ ಮಾಡುವ ಸಲುವಾಗಿ ಬಿಜೆಪಿಯ ಹಿರಿಯ ನಾಯಕ ವಿಜಯ್ ಗೋಯಲ್, ಸಿವಿಲ್ ಲೈನ್ಸ್‌ನಲ್ಲಿರುವ ಅವರ ನಿವಾಸಕ್ಕೆ ಆ್ಯಂಬುಲೆನ್ಸ್ ಒಂದನ್ನು ರವಾನಿಸಿದ್ದರಾದರೂ, ಅದನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ವಾಪಸ್ ಕಳಿಸಿದರು.
ಸುಪ್ರೀಂಕೋರ್ಟ್‌ನ ಮಧ್ಯಂತರ ಜಾಮೀನು ಆದೇಶದ ಪ್ರಕಾರ, ಇಂದು ಅರವಿಂದ್ ಕೇಜ್ರಿವಾಲ್‌ರ ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಳ್ಳಲಿದ್ದು, ನಾಳೆ ಅವರು ತಿಹಾರ್ ಜೈಲಿಗೆ ಮರಳಬೇಕಿದೆ.