ಐಎಸ್ಐ ಪರವಾಗಿ ಬೇಹುಗಾರಿಕೆ ನಡೆಸಿದ ಬ್ರಹ್ಮೋಸ್ ಇಂಜಿನಿಯರ್ ನಿಶಾಂತ್ ಅಗರ್ವಾಲ್ ಗೆ ಜೀವಾವಧಿ ಶಿಕ್ಷೆ
ನಾಗಪುರ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ನಾಗಪುರದ ನ್ಯಾಯಾಲಯವೊಂದು ಸೋಮವಾರ ಬ್ರಹ್ಮೋಸ್ ಏರೋಸ್ಪೇಸ್ ನ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಬ್ರಹ್ಮೋಸ್ ಕ್ಷಿಪಣಿ ಕುರಿತ ಮಾಹಿತಿಯನ್ನು ಐಎಸ್ಐಗೆ ಸೋರಿಕೆ ಮಾಡಿದ ಆರೋಪದಲ್ಲಿ ಅಗರ್ವಾಲ್ ನನ್ನು 2018ರಲ್ಲಿ ಬಂಧಿಸಲಾಗಿತ್ತು. ಬ್ರಹ್ಮೋಸ್ ಏರೋಸ್ಪೇಸ್ ಭಾರತದ ಡಿಆರ್ಡಿಒ ಮತ್ತು ರಶ್ಯದ ಎನ್ಪಿಒ ಮಶಿನೊಸ್ಟ್ರೋಯೆನಿಯ ನಡೆಸುತ್ತಿರುವ ಜಂಟಿ ಭಾಗೀದಾರಿಕೆ ಸಂಸ್ಥೆಯಾಗಿದೆ. ಈ ಸಂಸ್ಥೆಯು ಭಾರತದ ಸೂಪರ್ಸೋನಿಕ್ ಕ್ರೂಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ. ಅಗರ್ವಾಲ್ ಈ ಸಂಸ್ಥೆಯಲ್ಲಿ ಸೀನಿಯರ್ ಸಿಸ್ಟಮ್ ಇಂಜಿನಿಯರ್ ಆಗಿದ್ದನು.
ಅಗರ್ವಾಲ್ 14 ವರ್ಷ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗಿದೆ ಮತ್ತು ಆತನಿಗೆ 3,000 ರೂ. ದಂಡವನ್ನೂ ವಿಧಿಸಲಾಗಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ನ 235ನೇ ವಿಧಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ 66(ಎಫ್) ವಿಧಿ ಮತ್ತು ಸರಕಾರಿ ರಹಸ್ಯಗಳ ಕಾಯ್ದೆ (ಒಎಸ್ಎ)ಯ ವಿವಿಧ ವಿಧಿಗಳನ್ವಯ ಹೂಡಲಾಗಿರುವ ಪ್ರಕರಣದಲ್ಲಿ ಅಗರ್ವಾಲ್ ದೋಷಿಯಾಗಿದ್ದಾನೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಮ್.ವಿ. ದೇಶಪಾಂಡೆ ತನ್ನ ಆದೇಶದಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಎಪ್ರಿಲ್ ನಲ್ಲಿ, ಬಾಂಬೆ ಹೈಕೋರ್ಟ್ ನ ನಾಗಪುರ ಪೀಠವು ಅಗರ್ವಾಲ್ ಗೆ ಜಾಮೀನು ನೀಡಿತ್ತು.
2018ರಲ್ಲಿ ಈ ಪ್ರಕರಣವು ಸಂಚಲನ ಸೃಷ್ಟಿಸಿತ್ತು. ನೇಹಾ ಶರ್ಮ ಮತ್ತು ಪೂಜಾ ರಂಜನ್ ಎಂಬ ಎರಡು ಫೇಸ್ಬುಕ್ ಖಾತೆಗಳ ಮೂಲಕ ಅಗರ್ವಾಲ್ ಪಾಕಿಸ್ತಾನದ ಶಂಕಿತ ಬೇಹುಗಾರಿಕಾ ಏಜಂಟ್ ಗಳ ಜೊತೆ ಸಂಪರ್ಕದಲ್ಲಿದ್ದನು.
ನಿಶಾಂತ್ ಅಗರ್ವಾಲ್ ಡಿಆರ್ಡಿಒ ಕೊಡುವ ಯುವ ವಿಜ್ಞಾನಿ ಪ್ರಶಸ್ತಿ ವಿಜೇತರಾಗಿದ್ದನು. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುರುಕ್ಷೇತ್ರದ ವಿದ್ಯಾರ್ಥಿಯಾಗಿದ್ದ ಆತ ಪ್ರತಿಭಾವಂತ ಇಂಜಿನಿಯರ್ ಆಗಿದ್ದನು ಎನ್ನಲಾಗಿದೆ.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.